

ಅರಕಲಗೂಡು: ಇತಿಹಾಸ ಪ್ರಸಿದ್ಧ ತಾಲೂಕಿನ ಬಸವಾಪಟ್ಟಣದ ಕೋಟೆ ಐತಿಹಾಸಿಕ ಶ್ರೀ ಲಕ್ಷ್ಮೀಕಾಂತಸ್ವಾಮಿ ಬ್ರಹ್ಮ ರಥೋತ್ಸವ ಮಂಗಳವಾರ ಸಂಭ್ರಮದಿಂದ ನಡೆಯಿತು.
ರಥ ಸಪ್ತಮಿ ದಿನವಾದ ಮಂಗಳವಾರ ಗ್ರಾಮದಲ್ಲಿ ರಥೋತ್ಸವ ಅಂಗವಾಗಿ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು. ದೇವಸ್ಥಾನದಲ್ಲಿ ಕಳೆದ ಕೆಲ ದಿನಗಳಿಂದ ವಿಶೇಷ ಪೂಜೆ, ದೇವರ ಬೆಳ್ಳಿ ಪಲ್ಲಕ್ಕಿ ಉತ್ಸವಗಳು ನಡೆದವು. ಬೆಳಗ್ಗೆ ದೇವರಿಗೆ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಪೂಜೆ, ಅಭಿಷೇಕ, ಕೃಷ್ಣ ಗಂಧೋತ್ಸವ ಸೇವೆ ಸಲ್ಲಿಸಲಾಯಿತು.
ಭಕ್ತರು ದೇವರ ಉತ್ಸವ ಮೂರ್ತಿಯನ್ನು ದೇವಸ್ಥಾನ ಸುತ್ತ ಪ್ರದಕ್ಷಿಣೆ ಹಾಕಿಸಿ ಹೊರತಂದು ಪ್ರಮುಖ ಬೀದಿಗಳಲ್ಲಿ ಉತ್ಸವ ಅಡ್ಡೆ ಮೇಲೆ ಕೂರಿಸಿ ಮೆರವಣಿಗೆ ನಡೆಸಿ ಭಕ್ತಿ ಭಾವ ಅರ್ಪಿಸಿದರು. ಬಳಿಕ ಅಲಂಕೃತ ರಥದ ಮೇಲೆ ಪ್ರತಿಷ್ಠಾಪಿಸಿ ವಿಶೇಷ ಪ್ರಜೆ ಸಲ್ಲಿಸಿದ ನಂತರ ಭಕ್ತರು ದೇವರ ನಾಮಸ್ಮರಣೆ ಮಾಡುತ್ತಾ ರಥ ಎಳೆದರು.
ರಥ ಮುಂದೆ ಚಲಿಸುವಾಗ ಹಣ್ಣು ದವನ ಎಸೆದು ಭಕ್ತಿ ಸಮರ್ಪಿಸಿದರು. ಕೋಟೆ ರಥ ಬೀದಿಯಲ್ಲಿ ಗಣಪತಿ ದೇವಸ್ಥಾನದ ತನಕ ಚಲಿಸಿದ ತೇರು ಮತ್ತೆ ಸ್ವಸ್ಥಾನ ಸೇರಿತು. ದೇವಸ್ಥಾನದಲ್ಲಿ ಭಕ್ತರು ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಬಿಸಿಲಿನಿಂದ ಬಳಲಿದ್ದ ಜನರಿಗೆ ಸಿಹಿ ಪಾನಕ ವಿತರಿಸಲಾಯಿತು. ಸುತ್ತಮುತ್ತಲಿನ ಗ್ರಾಮಗಳ ಜನರು ಜಾತ್ರೆಯ ಸಡಗರದಲ್ಲಿ ಪಾಲ್ಗೊಂಡಿದ್ದರು.