ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸಿ: ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಸಲಹೆ

Lakshmi Janardhan Educational Institute Anniversary mandya
Published on

ಮಂಡ್ಯ: ಕಲೆ, ಸಾಹಿತ್ಯ, ಸಂಸ್ಕೃತಿ ಕಡೆಗೆ ಮಕ್ಕಳನ್ನು ಸೆಳೆಯುವುದರಿಂದ ಅವರಲ್ಲಿ ಮಾನವೀಯ ಮೌಲ್ಯ, ವೈಚಾರಿಕತೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ತಿಳಿಸಿದರು.

ನಗರದ ಲಕ್ಷ್ಮೀ ಜನಾರ್ದನ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಕೌಸ್ತುಭ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಮಾಜಮುಖಿಯಾಗಿ ವ್ಯಕ್ತಿತ್ವ ರೂಪಿಸಿಕೊಳ್ಳುವುದಕ್ಕೆ ಕೇವಲ ಅತಿ ಹೆಚ್ಚು ಅಂಕ ಪಡೆದರೆ ಸಾಲದು. ಮೌಲ್ಯಗಳು, ಮಾನವೀಯತೆ, ವೈಚಾರಿಕತೆ, ವಿಚಾರವಂತಿಕೆಯನ್ನು ರೂಢಿಸಿಕೊಂಡಲ್ಲಿ ಬದುಕು ಸಾರ್ಥಕತೆ ಪಡೆಯಲು ಸಾಧ್ಯ ಎಂದು ಪ್ರತಿಪಾದಿಸಿದರು.

ಕೋವಿಡ್ ನಂತರ ಎಲ್ಲ ಶಾಲಾ ಕಾಲೇಜುಗಳಲ್ಲೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೂ ಕೆಲ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇದಕ್ಕೆ ಅಲ್ಲಿನ ಅಧ್ಯಾಪಕ ವರ್ಗ ಕಾರಣವಾಗುತ್ತದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಉಳಿಯಲು ಅಲ್ಲಿನ ಶಿಕ್ಷಕರು ವಿದ್ಯಾರ್ಥಿಗಳನ್ನು ಆಧರಿಸಿ ಅರ್ಥ ಆಗುವ ರೀತಿಯಲ್ಲಿ ಪಾಠ ಮಾಡುವುದರ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಅವರನ್ನು ಭಾಗವಹಿಸುವಂತೆ ಮಾಡುತ್ತಿದ್ದಾರೆ ಎಂದರು.

ಶಿಕ್ಷಕರಿಗೆ ತುಂಬ ತೊಂದರೆ ಇದೆ. ಹಲವಾರು ಸಮಸ್ಯೆಗಳೂ ಅವರನ್ನು ಕಾಡುತ್ತಿವೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತಿದ್ದೇವೆ. ಹೋರಾಟ ಮಾಡುತ್ತಿದ್ದೇವೆ. ಸರ್ಕಾರಗಳು ಸಹ ಸ್ವಲ್ಪ ಮಟ್ಟಿಗೆ ಸಹಕಾರ ನೀಡುತ್ತಿವೆಯಾದರೂ, ಸಾಲದು. ಶಿಕ್ಷಕರ ಸಮಸ್ಯೆಗಳ ಬಗ್ಗೆ ನಾವು ನಿರಂತರ ಹೋರಾಟ ಮಾಡುತ್ತಲೇ ಇರುತ್ತವೆ ಎಂದು ಭರವಸೆ ನೀಡಿದರು.

ಶಾಸಕ ರವಿಕುಮಾರ್ ಗಣಿಗ ಸಮಾರಂಭ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷೆ ಅಂಜನಾ ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು. ಡಿಡಿಪಿಯು ಸಿ.ಚಲುವಯ್ಯ, ಡಾ.ಬಿ.ಕೆ.ಸುರೇಶ್, ಶಕೀಲಾ ಪ್ರಕಾಶ್, ಮಂಜುನಾಥ್, ಅಶೋಕ್, ಕಸ್ತೂರಿ, ಎನ್.ಜಿ.ಲತಾ, ಎಚ್.ವಿ. ಧನಲಕ್ಷ್ಮೀ ಇತರರಿದ್ದರು. ಇದೇ ವೇಳೆ ಶಿಕ್ಷಕ ರವಿಕುಮಾರ್ ಅವರು ನೀಡಿದ ಲ್ಯಾಪ್‌ಟಾಪ್‌ಗಳನ್ನು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net