ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ 28 ರಿಂದ,

Lord Mahalakshmi
Published on

ಮಮದಾಪುರ: ಗೋಕಾಕ ತಾಲೂಕಿನ ಮಮದಾಪುರ ಗ್ರಾಮದಲ್ಲಿ ಪ್ರಥಮ ಬಾರಿಗೆ ಏ.28 ರಿಂದ 30ರ ವರೆಗೆ ಶ್ರೀ ಲಕ್ಷ್ಮೀದೇವಿಯ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ.

ಸುಮಾರು 50 ವರ್ಷಗಳ ಹಿಂದೆ ಗ್ರಾಮದಲ್ಲಿ ಶ್ರೀ ಲಕ್ಷ್ಮೀದೇವಿಯ ಪುಟ್ಟ ದೇವಾಲಯವಿತ್ತು. ಕಾಲ ಕ್ರಮೇಣ ಗ್ರಾಮದ ಭಕ್ತರಿಂದ ಜೀರ್ಣೋದ್ಧಾರಗೊಂಡ ಬಳಿಕ ದೇವಸ್ಥಾನದ ಕಮಿಟಿ ಪ್ರಥಮ ಬಾರಿಗೆ ಜಾತ್ರಾ ಮಹೋತ್ಸವ ಆಚರಿಸಲು ನಿರ್ಧರಿಸಿದೆ.

ಗ್ರಾಮದಲ್ಲಿ ಮಂಗಳವಾರ ಹಾಗೂ ಶುಕ್ರವಾರ ಐದು ಕಟ್ಟಾವಾರ ಆಚರಣೆ ಪೂರ್ಣಗೊಳಿಸಿ, ಜಾತ್ರೆಗೆ ಭರದ ಸಿದ್ಧತೆ ನಡೆದಿವೆ. ಏ.28ರಂದು ಮಾಳಗಿ ಪೂಜೇರಿ ಅವರಿಂದ ಹೋಮ ಪೂಜೆ, ಗ್ರಾಮದ ಎಲ್ಲ ದೇವತೆಗಳ ಪೂಜೆ, ಅಭಿಷೇಕ, ನೈವೇದ್ಯ ಅರ್ಪಿಸಲಾಗುವುದು. ಲಕ್ಷ್ಮೀದೇವಿ ಮೂರ್ತಿಗೆ ಅಲಂಕಾರ ನೆರವೇರಲಿದೆ. ಕುಂಭಮೇಳ ಹಾಗೂ ವಿವಿಧ ವಾದ್ಯಗಳೊಂದಿಗೆ ಬಸವೇಶ್ವರ ಸರ್ಕಲ್‌ನಿಂದ ಲಕ್ಷ್ಮೀ ದೇವಸ್ಥಾನದವರೆಗೆ ಉಸ್ಕಿಹಾಳ ಮಹರ್ಷಿ ವಾಲ್ಮೀಕಿ ಗುರುಪೀಠದ ಆತ್ಮಾನಂದ ಸ್ವಾಮೀಜಿ, ಸ್ಥಳೀಯ ಚರಮೂರ್ತಿಶ್ವರ ಸ್ವಾಮೀಜಿ, ಮೌನ ಮಲ್ಲಿಕಾರ್ಜುನ ಶಿವಯೋಗಿಗಳು ಹಾಗೂ ಶಾಂತಾರೂಢ ಸ್ವಾಮೀಜಿ ಸ್ವಾಗತ ಮೆರವಣಿಗೆ ಹಾಗೂ ದೇವರ ಪಲ್ಲಕ್ಕಿ ಉತ್ಸವ ಜರುಗಲಿದೆ. ಮಹಾಪ್ರಸಾದ ಏರ್ಪಡಿಸಲಾಗಿದೆ.

ಏ.29 ರಂದು ಲಕ್ಷ್ಮೀ ದೇವಿಗೆ ಉಡಿ ತುಂಬುವುದು. ಪಲ್ಲಕ್ಕಿ ಉತ್ಸವ, ಮಹಾಪ್ರಸಾದ ಜರುಗಲಿದೆ. ಜೋಡು ಕುದುರೆ ಗಾಡಿ ಶರ್ಯತ್ತು, ಜೋಡು ಎತ್ತಿನ ಗಾಡಿ ಶರ್ಯತ್ತು ಹಾಗೂ ಡೊಳ್ಳು ಬಾರಿಸಿ ನಾಣ್ಯ ಸರಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ರಾತ್ರಿ ರವಿ ಸಾವಳಗಿ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಏ.30 ರಂದು ಲಕ್ಷ್ಮೀದೇವಿ ಹಾಗೂ ಎಲ್ಲ ದೇವರುಗಳ ಪಲ್ಲಕ್ಕಿ ಪೂಜೆ, ಉಡಿ ತುಂಬುವುದು, ಭಂಡಾರ ಒಡೆಯುವ ಕಾರ್ಯ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net