

ಕಿಕ್ಕೇರಿ: ಇಲ್ಲಿನ ಕೇಶವಶೆಟ್ಟಿ ದೇವರಮನೆ ವಠಾರದವರು ಭಾನುವಾರ ಶ್ರದ್ಧಾಭಕ್ತಿಯಿಂದ ಲಕ್ಷ್ಮೀದೇವಿ ಹಬ್ಬವನ್ನು ಆಚರಿಸಿದರು.
ಬಲು ಹಿಂದೆ ಈ ವಠಾರದ ದೇವರಮನೆಯಲ್ಲಿ 8 ಅಡಿಗೂ ಎತ್ತರವಾಗಿ ಹುತ್ತ ಬೆಳೆದಿತ್ತು. ಕಾಲ ಕಳೆದಂತೆ ದೇವರಮನೆ ಶಿಥಿಲವಾಗಿ ಕುಸಿಯಿತು. ಹುತ್ತವೂ ಕೂಡ ನಾಮಾವಶೇಷವಾಯಿತು.
ದೇವರಮನೆ ವಠಾರದವರು ಅಂತಿಮವಾಗಿ ತೋಟದಲ್ಲಿ ವಾರ್ಷಿಕ ಪೂಜೆಯನ್ನು ಸಲ್ಲಿಸುತ್ತಿದ್ದಾರೆ. ಅದರಂತೆ ಭಾನುವಾರ ತೋಟದಲ್ಲಿ ಹಸಿರು ಚಪ್ಪರ, ತಳಿರು ತೋರಣ ಕಟ್ಟಿ ದೇವಿಯ ಗದ್ದುಗೆ ನಿರ್ಮಿಸಿ ವಿವಿಧ ಪುಷ್ಪಗಳಿಂದ ಅಲಂಕರಿಸಲಾಯಿತು.
ಪೂಜೆಗೂ ಮುನ್ನ ಅಮಾನಿಕೆರೆಯಲ್ಲಿ ಗಂಗೆಯನ್ನು ಕಳಸದಲ್ಲಿ ತುಂಬಿಕೊಂಡು ದೇವಿ ಆವಾಹನೆ ಮಾಡಲಾಯಿತು. ಅರಿಶಿನ, ಕುಂಕುಮ, ಹೂವುಗಳಿಂದ ಕಳಸ ಅಲಂಕರಿಸಿ ಪೂಜಿಸಲಾಯಿತು. ಗಂಗಾಜಲದ ಕಳಸವನ್ನು ಹೊಂಬಾಳೆಯೊಂದಿಗೆ ಕಿಶೋರಿಯರ ತಲೆಮೇಲೆ ಹೊರಿಸಿ ಮಂಗಳವಾದ್ಯದೊಂದಿಗೆ ದೇವಿಯ ಕಳಶವನ್ನು ಹೊತ್ತು ತರಲಾಯಿತು. ನಂತರ ಗದ್ದುಗೆಯಲ್ಲಿ ಕಳಸ ಪ್ರತಿಷ್ಠಾಪಿಸಿ ಧೂಪ, ದೀಪಗಳಿಂದ ಆರತಿ ಬೆಳಗಿ ದೇವಿಗೆ ಬಲಿ ಅರ್ಪಿಸಲಾಯಿತು. ಭಕ್ತರು ದೇವಿಗೆ ಬಾಗಿನ, ಸೀರೆ ಸಮರ್ಪಿಸಿ ಪೂಜೆ ಸಲ್ಲಿಸಲಾಯಿತು. ವಿವಿಧ ಭಕ್ಷ ಭೋಜನ, ಕಜ್ಜಾಯ ನೈವೇದ್ಯ ಸಮರ್ಪಿಸಲಾಯಿತು. ಭಕ್ತರು ಸರತಿಯಲ್ಲಿ ಸಾಗಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ದೇವಿಯ ಗುಡಿಯನ್ನು ಭಕ್ತರ ಸಹಕಾರದಲ್ಲಿ ನೂತನವಾಗಿ ನಿರ್ಮಿಸಲು ಚರ್ಚಿಸಲಾಯಿತು.