

ಕಿಕ್ಕೇರಿ: ಹೋಬಳಿಯ ಗಡಿಭಾಗದ ಬೋಳಮಾರನಹಳ್ಳಿ ಗ್ರಾಮದಲ್ಲಿ ಲಕ್ಷ್ಮೀದೇವಿ ಅಮ್ಮನವರ ಜಾತ್ರೆ ಏ.5ರ ಸಂಜೆ 6.30ಕ್ಕೆ ಜರುಗಲಿದೆ.
ಮಹೋತ್ಸವದ ಅಂಗವಾಗಿ ಇಡೀ ರಾತ್ರಿ ದೇವಿಯ ಕರಗದ ಮೆರವಣಿಗೆ ನಡೆಯಲಿದೆ. ಹೊಂಬಾಳೆ ಕಳಸ ಹೊತ್ತ ಬಾಲಕಿಯ ಮೇಲೆ ದೇವಿ ಅವಾಹನೆಯಾಗಿ ಇಡೀ ಗ್ರಾಮದಲ್ಲಿ ಮೆರವಣಿಗೆ ಸಾಗಲಿದೆ. ರಾತ್ರಿ ದೇವಿಯ ಉತ್ಸವ, ರಂಗಕುಣಿತ, ಮೆರವಣಿಗೆ ತಮಟೆ- ಮದ್ದಳೆಯೊಂದಿಗೆ ಜರುಗಲಿದೆ. ಮೆರವಣಿಗೆ ಹಿಮ್ಮುಖ, ಮುಮ್ಮುಖವಾಗಿ ಕಣ್ಣು ಮುಚ್ಚಿಕೊಂಡು ರಭಸದಿಂದ ಸಾಗುವುದು ಜಾತ್ರೆ ವಿಶೇಷವಾಗಿದೆ.
ತದನಂತರ ದೇವಿಯ ಉತ್ಸವ ಮೂರ್ತಿ ಮೆರವಣಿಗೆಯೊಂದಿಗೆ ರಂಗಸ್ಥಳ ಸಾಗಲಿದೆ. ದೇವಿ ಮೂರ್ತಿಯನ್ನು ರಂಗದ ತೇರಿನಲ್ಲಿ ಪ್ರತಿಷ್ಟಾಪಿಸಿ ಸುತ್ತಮುತ್ತಲ ಗ್ರಾಮಸ್ಥರು ದೇವಿಗೆ ಆರತಿ, ಹಣ್ಣು, ಕಾಯಿ ಅರ್ಪಿಸಲಿದ್ದಾರೆ. ನಾಡಿನ ಪ್ರಖ್ಯಾತ ಕಲಾವಿದರಿಂದ ಜಾನಪದ, ಸುಗಮ ಸಂಗೀತ ಕಾರ್ಯಕ್ರಮ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮವಿದೆ. ಗ್ರಾಮದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಜಾತ್ರಾ ಸಮಿತಿ, ಶಂಭುಲಿಂಗೇಶ್ವರ ಯುವಕ ಸಂಘದ ಸದಸ್ಯರು, ಗ್ರಾಮ ಮುಖಂಡರು ಜಾತ್ರೆ ಉಸ್ತುವಾರಿ ವಹಿಸಲಿದ್ದಾರೆ.
ಗ್ರಾಮ ತಳಿರು-ತೋರಣ, ವಿದ್ಯುತ್‌ದೀಪಗಳಿಂದ ಶೃಂಗರಿಸಲಾಗಿದೆ. ಬಂದ ಭಕ್ತಾದಿಗಳಿಗೆ ಅನ್ನಪ್ರಸಾದ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.