ಚಾಮುಂಡೇಶ್ವರಿ ಉತ್ಸವಮೂರ್ತಿಗೆ ‘ಲಕ್ಷ್ಮೀ’ ಅಲಂಕಾರ

33
Published on

ಮೈಸೂರು: ಬೆಟ್ಟದ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಸಕ್ತ ವರ್ಷದ ಮೊದಲ ಆಷಾಢ ಶುಕ್ರವಾರ ಪೂಜಾ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯೊಂದಿಗೆ ನೆರವೇರಿತು.

ದೇವಸ್ಥಾನದಲ್ಲಿ ಬೆಳಗಿನ ಜಾವ 3.30 ರಿಂದಲೇ ಪೂಜಾ ಕೈಂಕರ್ಯಗಳು ಪ್ರಾರಂಭಗೊಂಡವು. ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ನೇತೃತ್ವದಲ್ಲಿ ಅರ್ಚಕರು ಪೂಜೆ ನೆರವೇರಿಸಿದರು. ಮಹಾನ್ಯಾಸಕಪೂರ್ವಕ ರುದ್ರಾಭಿಷೇಕ, ಮಹಾಮಂಗಳಾರತಿ ನಂತರ ಬೆಳಗ್ಗೆ 5.30ಕ್ಕೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು. ಈ ಮಧ್ಯೆ ಬೆಳಗ್ಗೆ 9.30ಕ್ಕೆ ದೇವಿಗೆ ಮಹಾ ಮಂಗಳಾರತಿ, ಸಂಜೆ 6 ರಿಂದ 7.30ರವರೆಗೆ ಅಭಿಷೇಕ ನಡೆಯಿತು.

ಆಷಾಢ ಶುಕ್ರವಾರದ ಮೊದಲ ವಾರ ತಾಯಿ ಚಾಮುಂಡೇಶ್ವರಿ ಉತ್ಸವಮೂರ್ತಿ ‘ಲಕ್ಷ್ಮೀ’ ಅಲಂಕಾರದಲ್ಲಿ ಕಂಗೊಳಿಸಿತು. ದೇವಸ್ಥಾನದ ಗರ್ಭಗುಡಿ ಆವರಣವನ್ನು ನಾಲ್ಕು ಬಗೆಯ ಅಲಂಕಾರ ಮಾಡಲಾಗಿತ್ತು.

ದೇವಸ್ಥಾನದ ಆವರಣ ಬಗೆ ಬಗೆಯ ಫಲಪುಷ್ಪಗಳಿಂದ ಅಲಂಕೃತಗೊಂಡಿತ್ತು. ಕೆಂಪು, ನೀಲಿ, ಬಿಳಿ, ಹಳದಿ, ಗುಲಾಬಿ ಹೂ, ಸೇವಂತಿ ಹೂ, ಚೆಂಡು ಹೂ ಸೇರಿದಂತೆ ವಿವಿಧ ಬಗೆಯ ಹೂಗಳಿಂದ ದೇವಸ್ಥಾನದ ಆವರಣವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಅಲ್ಲದೆ ಹೊರ ಆವರಣವನ್ನೂ ಹೂಗಳಿಂದ ಅಲಂಕರಿಸಿದ್ದರಿಂದ ದೇವಸ್ಥಾನಕ್ಕೆ ಮತ್ತಷ್ಟು ಮೆರುಗು ಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net