

ಲಕ್ಷ್ಮೇಶ್ವರ: ಪಟ್ಟಣದಲ್ಲಿರುವ ಗ್ರಾಮ ಚಾವಡಿಯಿಂದ ಭರಮದೇವರ ಸರ್ಕಲ್ವರೆಗಿನ ಮುಖ್ಯ ಬಜಾರ ರಸ್ತೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ರಾಜ್ಯ ನಿವೃತ್ತ ಸರ್ಕಾರಿ ನೌಕರರು ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಆಗ್ರಹಿಸಿದರು.
ಸಂಘದ ಸದಸ್ಯ ಚಂಬಣ್ಣ ಬಾಳಿಕಾಯಿ ಮಾತನಾಡಿ, ರಸ್ತೆ ಅಗೆದು ಮಣ್ಣಿನ ಗುಂಪಿ ಹಾಕಿ ಕೈಬಿಟ್ಟಿರುವುದು ಮಕ್ಕಳು, ರೈತರು, ಹಿರಿಯರು ಸೇರಿ ಎಲ್ಲ ಸಾರ್ವಜನಿಕರು ಸಂಚರಿಸಲು ಹಾಗೂ ವ್ಯಾಪಾರಕ್ಕೆ ಸಾಕಷ್ಟು ಸಮಸ್ಯೆಯಾಗಿದೆ. ಬಜಾರದಲ್ಲಿ ಸಂಚರಿಸುವುದೇ ದುಸ್ತರವಾಗಿದೆ. ಕೇವಲ 200 ಮೀಟರ್ ರಸ್ತೆ ಕಾಮಗಾರಿ ಪ್ರಾರಂಭಿಸಿ ಎರಡು ತಿಂಗಳಾದರೂ ಶೇ. 10ರಷ್ಟು ಕೆಲಸವಾಗಿದೆ. ಅದರಲ್ಲಿಯೂ ನಡೆದಾಡಲು ಆಗುತ್ತಿಲ್ಲ. ಶುಕ್ರವಾರ ಸಂತೆಗೆ ಬಂದಿ ಹೋಗುವ ವೃದ್ಧ ಮಹಿಳೆಯರು, ಮಕ್ಕಳು ಜಾರಿ ಬಿದ್ದು ಮೈಕೈ ನೋವು ಮಾಡಿಕೊಳ್ಳುತ್ತಿದ್ದಾರೆ. ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದರಿಂದ ವ್ಯಾಪಾರಸ್ಥರು ತಮ್ಮ ಅಂಗಡಿಗಳ ಮುಂದೆ ತಾವೇ ಸ್ವತಃ ಮಣ್ಣು ಹಾಕಿಸಿಕೊಳ್ಳುತ್ತಿದ್ದಾರೆ. ಕಾರಣ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಹಿರಿಯ ನಾಗರಿಕರ ಸಂಘದ ವತಿಯಿಂದ ಬಜಾರದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಾಗರಾಜ ಚಿಂಚಲಿ ಮಾತನಾಡಿ, ರಸ್ತೆ ಕಾಮಗಾರಿಗೆ ಹಾಕಿರುವ ಮಣ್ಣು ಕಳಪೆಯಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದರೂ ಅದು ಗುಣಮಟ್ಟದ್ದಾಗಿದೆ ಎಂದು ಅಧಿಕಾರಿಗಳು ಸೇರಿ ಅನೇಕರು ಗುತ್ತಿಗೆದಾರರ ಪರ ವಕಾಲತ್ತು ವಹಿಸುತ್ತಿದ್ದಾರೆ. ಸಾರ್ವಜನಿಕರೇ ಮಣ್ಣಿನ ಗುಣಮಟ್ಟ ಪರೀಕ್ಷೆ ಮಾಡಿಸುತ್ತೇವೆ. ಈಗ ರಸ್ತೆ ಹಾಕಿರುವ ಮಣ್ಣನ್ನು ಬದಲಿಸಿ ಕೆಂಪು ಗರಸು ಮಣ್ಣು ಹಾಕಬೇಕು. ಇಲ್ಲದಿದ್ದರೆ ರಸ್ತೆಯಲ್ಲಿ ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದರು.
ಮಂಜುನಾಥ ಮಾಗಡಿ, ಚನ್ನಪ್ಪ ಕೋಲಕಾರ, ಕುಬೇರಪ್ಪ ಮಹಾಂತಶೆಟ್ಟರ, ಎಸ್.ಪಿ. ಪಾಟೀಲ, ಸಿ.ಎಸ್. ಕೋಟಿಮಠ, ಎಸ್.ಜಿ. ತಾಳಿಕೋಟಿಮಠ, ದ್ಯಾಮನಗೌಡ ಪಾಟೀಲ, ನೀಲಪ್ಪ ಕರ್ಜಕಣ್ಣವರ, ನಾಗರಾಜ ಚಿಂಚಲಿ, ಮಂಜುನಾಥ ಮಾಗಡಿ, ಚಂದ್ರಶೇಖರ ಹೂಗಾರ, ಶಕುಂತಲಾ ಅಳಗವಾಡಿ, ಈರಣ್ಣ ಮಡಿವಾಳರ, ಇತರರಿದ್ದರು.