

ಮಲ್ಲು ಕಳಸಾಪುರ ಲಕ್ಷ್ಮೇಶ್ವರ
ಪಟ್ಟಣ ಸೇರಿ ತಾಲೂಕಿನಾದ್ಯಂತ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಯಿಂದ ಜನತೆ ಬೆಚ್ಚಿ ಬೀಳುವಂತಾಗಿದೆ. ಕಳೆದ 7 ತಿಂಗಳಲ್ಲಿ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ 898 ಜನರು ನಾಯಿ ಕಡಿತಕ್ಕೆ ಚಿಕಿತ್ಸೆ ಪಡೆದಿದ್ದಾರೆ.
ಪಟ್ಟಣದಲ್ಲಿ ಮಕ್ಕಳನ್ನು ಹೊರಬಿಡದ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆ ಮುಂದೆ ಆಟ ಆಡುತ್ತಿರುವ ಮಕ್ಕಳ ಮೇಲೆ ಶ್ವಾನಗಳು ದಾಳಿ ಮಾಡುತ್ತಿವೆ. ನಿತ್ಯವೂ ಒಂದಿಲ್ಲೊಂದು ಕಡೆ ನಾಯಿ ಕಡಿತದಿಂದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡುವ ಘಟನೆಗಳು ಮರುಕಳಿಸುತ್ತಿವೆ.
ಬೀದಿ ನಾಯಿಗಳ ಸಂಖ್ಯೆ ಮತ್ತು ಉಪಟಳ ಹೆಚ್ಚುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾಣಿಗಳ ಜನನ ನಿಯಂತ್ರಣ (ನಾಯಿ) ನಿಯಮಗಳ ಜಾರಿ ವಿಚಾರದಲ್ಲಿ ಸರ್ಕಾರದ ನಡೆ ಪ್ರಶ್ನಿಸಿರುವ ಹೈಕೋರ್ಟ್ ಸಮರ್ಪಕ ಉತ್ತರಕ್ಕೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದರೂ ನಾಯಿಗಳ ಜನನ ನಿಯಂತ್ರಣಕ್ಕೆ ಸ್ಥಳೀಯಾಡಳಿತಗಳು ಗಮನ ಹರಿಸಿಲ್ಲ.
ಪಾಲಕರಿಗೆ ಭಯ: 15-20 ಹಿಂಡು ನಾಯಿಗಳ ಬೀದಿ ಕಡಿದಾಟ, ಕೂಗಾಟ, ಓಡಾಟದ ಭಯದಿಂದ ಪಾಲಕರು ಮಕ್ಕಳನ್ನು ಬೆಳಗ್ಗೆ ಟೂಷನ್ ಕ್ಲಾಸ್, ಶಾಲೆ, ಆಟ, ಸೈಕಲ್ ಓಡಿಸಲು ಹೊರಗೆ ಕಳುಹಿಸಲು ಹೆದರುತ್ತಿದ್ದಾರೆ. ಬೆಳಗ್ಗೆ ಹಾಲು, ಪೇಪರ್, ಹೂವು, ಹಣ್ಣು, ತರಕಾರಿ ಮಾರಾಟಗಾರರು ಜೀವಹಿಡಿದು ಕಾರ್ಯನಿರ್ವಹಿಸುವ ಸ್ಥಿತಿಯಿದೆ. ರಾತ್ರಿ ಮತ್ತು ನಸುಕಿನ ಜಾವ ಸಂಚಾರದ ವೇಳೆ ಒಂದು ನಾಯಿ ಬೊಗಳಿದರೆ ಆ ಪ್ರದೇಶ ಎಲ್ಲ ನಾಯಿಗಳೂ ಬೊಗಳುತ್ತಾ ಸುತ್ತುವರಿಯುತ್ತವೆ. ಬೈಕ್ ಸವಾರರನ್ನು ಬೆನ್ನಟ್ಟುವ ನಾಯಿಗಳಿಂದ ಪಾರಾಗಲು ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ. ಮಕ್ಕಳು ತಿನಿಸು ತರುತ್ತಿದ್ದರೆ ಅವರ ಮೇಲೆ ದಾಳಿ ಮಾಡುತ್ತವೆ. ವಾಯುವಿಹಾರಿಗಳು, ವೃದ್ಧರಿಗೂ ನಾಯಿಗಳ ಭಯ ಕಾಡುತ್ತಿದೆ.
ಎಗ್‌ರೈಸ್ ರುಚಿಯೇ ಮೂಲ: ಪಟ್ಟಣದ ಬಹುತೇಕ ರಸ್ತೆ ಬದಿಗಳು, ಜನನಿಬಿಡ ಪ್ರದೇಶ, ಬಸ್-ಆಟೋ ನಿಲ್ದಾಣಗಳಲ್ಲಿ ತಲೆ ಎತ್ತಿರುವ ಚಿಕನ್-ಎಗ್‌ರೈಸ್ ಸೆಂಟರ್, ಬೇಕರಿ, ಮಾಂಸ ಮಾರಾಟದ ಅಂಗಡಿಗಳು, ಗೂಡಂಗಡಿ, ಡಾಭಾಗಳಿಂದ ರಸ್ತೆ ಬದಿಯಲ್ಲಿ ಚೆಲ್ಲುವ ಆಹಾರ ಪದಾರ್ಥ ಬೀದಿ ನಾಯಿಗಳಿಗೆ ಆಹಾರ ಒದಗಿಸಿದೆ. ಮಾಂಸದ ರುಚಿಗೆ ಬೆನ್ನತ್ತಿರುವ ಬೀದಿನಾಯಿಗಳು ಬೆಕ್ಕು, ಹಂದಿಮರಿ, ಕೋಳಿಮರಿಗಳನ್ನು ಹಿಡಿದು ತಿಂದು ಹಾಕುತ್ತಿವೆ. ಹೊರವಲಯದ ಜಮೀನುಗಳಲ್ಲಿ ನಾಯಿಗಳ ಹಿಂಡು ಬೇಕಾಬಿಟ್ಟಿಯಾಗಿ ಓಡಾಡಿ ಹಾನಿ ಮಾಡುತ್ತಿವೆ. ಜಮೀನಿನಲ್ಲಿ ಬರುವ ಜಿಂಕೆ, ನರಿ. ಮೊಲ ಸಣ್ಣ ಪ್ರಾಣಿಗಳನ್ನೂ ಬೇಟೆಯಾಡುತ್ತಿವೆ. ನಾಯಿಗಳ ಈ ರಾಕ್ಷಸ ಪ್ರವೃತ್ತಿಯಿಂದ ಜನತೆ ಬೆಚ್ಚಿ ಬಿದ್ದಿದ್ದಾರೆ. ಜಮೀನಿನಲ್ಲಿ ಓಡಾಡಿ ಬೆಳೆಯನ್ನೂ ಹಾಳು ಮಾಡುತ್ತಿವೆ.
ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣಕ್ಕೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಬೇಕಾದ ಸ್ಥಳೀಯ ಪುರಸಭೆ, ಗ್ರಾಪಂನವರು ತಲೆ ಕೆಡಿಸಿಕೊಂಡಿಲ್ಲ. ಇದರಿಂದ ಅವುಗಳ ಸಂಖ್ಯೆ ದುಪ್ಪಟ್ಟಾಗಿದೆ. ಇಡೀ ವಾತಾವರಣ ಹದಗೆಡಿಸಿವೆ. ಸಾರ್ವಜನಿಕರು ಪುರಸಭೆಗೆ ಮನವಿ ಮಾಡಿದ್ದಾರೆ. ಮಕ್ಕಳ ಹಿತದೃಷ್ಟಿಯಿಂದ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣ ಮಾಡಬೇಕು.ಶಿವಾನಂದ ಮೆಕ್ಕಿ, ಲಕ್ಷ್ಮೇಶ್ವರ ನಿವಾಸಿ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಪಶುಸಂಗೋಪನಾ ಇಲಾಖೆಯೊಂದಿಗೆ ಚರ್ಚಿಸಿ ಸಂತಾನಶಕ್ತಿ ಹರಣಶಸ್ತ್ರ ಚಿಕಿತ್ಸೆ, ಸ್ಥಳಾಂತರ ಸೇರಿ ಇತರ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚಿಸಲಾಗುವುದು. ಸಾರ್ವಜನಿಕರು ಸಾಕು ನಾಯಿಗಳ ಕೊರಳಿಗೆ ಬೆಲ್ಟ್ ಕಟ್ಟಿ ದಿನಪೂರ್ತಿ ಮನೆಯಿಂದ ಹೊರಬಿಡದಂತೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು, ಹೋಟೆಲ್-ಡಾಭಾ, ಬೀದಿಬದಿ ವ್ಯಾಪಾರಸ್ಥರು ಆಹಾರ-ಪದಾರ್ಥಗಳನ್ನು ರಸ್ತೆ ಬದಿ ಎಸೆಯದಂತೆ ಸೂಚಿಸಲಾಗುವುದು.-ಮಹೇಶ ಹಡಪದ, ಪುರಸಭೆ ಮುಖ್ಯಾಧಿಕಾರಿ