

ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಯಲ್ಲಿ ಶುಕ್ರವಾರ ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರಗಣ್ಣವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಜರುಗಿತು.
ಪುಲಿಗೆರೆಯ ಸಾರಸ್ವತ ಲೋಕಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ದಿ. ಪ್ರೊ. ಸಿ.ವಿ. ಕೆರಿಮನಿ ಅವರು ವಾಸಿಸುವ ವಿನಾಯಕನಗರದ ಬಡಾವಣೆಯ 2ನೇ ಮುಖ್ಯ ರಸ್ತೆಗೆ ಅವರ ಹೆಸರಿಡುವ ಬಗ್ಗೆ ಕಸಾಪ ತಾಲೂಕು ಘಟಕ, ಸಾಹಿತಿಗಳು, ಸಾರ್ವಜನಿಕರಿಂದ ಬಂದ ಮನವಿಗೆ ಸಭೆಯ ಸರ್ವಸದಸ್ಯರು ಸರ್ವಾನುಮತದ ಒಪ್ಪಿಗೆ ಸೂಚಿಸಿದರು.
ಪುರಸಭೆಯ ಅಂಗ ಶಿಕ್ಷಣ ಸಂಸ್ಥೆ ಉಮಾ ವಿದ್ಯಾಲಯ ಹೈಸ್ಕೂಲ್ ಮೈದಾನಕ್ಕೆ ಹೊಂದಿಕೊಂಡಿರುವ 2 ಎಕರೆ 34 ಗುಂಟೆ ಜಮೀನನ್ನು ಪ್ರಜಾಸೌಧ ನಿರ್ಮಿಸಲು ಒಪ್ಪಿಗೆ ಸೂಚಿಸುವ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸಲಾಯಿತು. ಆದರೆ, ಯಾವುದೇ ನಿರ್ಣಯ ಕೈಗೊಳ್ಳಲು ಸಾಧ್ಯವಾಗಲಿಲ್ಲ.
ಪುರಸಭೆಯ ಉಮಾ ಮಹಾವಿದ್ಯಾಲಯದ ಶತಮಾನೋತ್ಸವ ಆಚರಿಸುವದು, ಪುರಸಭೆ ಐಡಿಎಸ್‌ಎಂಟಿ ಮಳಿಗೆಗಳ ದುರಸ್ತಿ, ಬೀದಿ ದೀಪ ನಿರ್ವಹಣೆ, ತುಂಗಭದ್ರಾ ನೀರು ಶುದ್ಧೀಕರಣ ಘಟಕದ ನಿರ್ವಹಣೆ, ಸ್ವಚ್ಛತೆ ಸೇರಿ ವಿವಿಧ ಅಭಿವೃದ್ಧಿ ಕಾರ್ಯಗಳ 49ಕ್ಕೂ ಅಧಿಕ ವಿಷಯಗಳ ಕುರಿತು ಚರ್ಚಿಸಿ ನಿರ್ಧರಿಸಲಾಯಿತು.
ಇತ್ತಿಚೇಗೆ ನಿಧನರಾದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಾರ್ಡ್ ನಂ-13ರ ಉಪ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಶೋಭಾ ಬಸವರಾಜ ಮೆಣಸಿನಕಾಯಿ ಹಾಗೂ ಸರ್ಕಾರದಿಂದ ನಾಮನಿರ್ದೇಶನಗೊಂಡ ಸದಸ್ಯರಾದ ನೀಲಪ್ಪ ಪೂಜಾರ, ಶಿವಪ್ರಕಾಶ ಕೊಂಚಿಗೇರಿಮಠ, ಕಿರಣ ನವಲೆ, ಮಹಾಂತೇಶ ಗುಡಿಸಲಮನಿ, ವಾಸೀಂಅಕ್ರಮ್ ಮುಚ್ಚಾಲೆ ಅವರು ಪ್ರಮಾಣವಚನ ಸ್ವೀಕರಿಸಿದರು. ಮುಖ್ಯಾಧಿಕಾರಿ ಮಹೇಶ ಹಡಪದ, ವ್ಯವಸ್ಥಾಪಕಿ ಮಂಜುಳಾ ಹೂಗಾರ, ಶೋಭಾ ಬೆಳ್ಳಿಕೊಪ್ಪ, ಇಂಜಿನಿಯರ್ ವೀರೇಂದ್ರಸಿಂಗ್ ಕಾಟೇವಾಲೆ, ಹನುಮಂತ ನಂದೆಣ್ಣವರ ಇತರರಿದ್ದರು.
ಸಮಯ ನುಂಗಿದ ನಾಮ ಫಲಕ: ಸಭೆ ಆರಂಭವಾಗುತ್ತಿದ್ದಂತೆಯೇ ತಮ್ಮ ಹೆಸರಿನ ನೇಮ್‌ಪ್ಲೇಟ್ ಇಲ್ಲದ್ದರಿಂದ ಆಕ್ರೋಶಗೊಂಡ ಸದಸ್ಯ ಮಹೇಶ ಹೊಗೆಸೊಪ್ಪಿನ, ಎಲ್ಲ ಸದಸ್ಯರ ಹೆಸರಿನ ಮುಂದೆ ನೇಮ್ ಪ್ಲೇಟ್ ಇದೆ. ಆದರೆ, ಉದ್ದೇಶಪೂರ್ವಕವಾಗಿ ನನ್ನ ಸೀಟಿನ ಬಳಿ ನೇಮ್ ಪ್ಲೇಟ್ ಇಟ್ಟಿಲ್ಲ ಎಂದು ಮುಖ್ಯಾಧಿಕಾರಿ ವಿರುದ್ಧ ಹರಿಹಾಯ್ದರು. ಮುಖ್ಯಾಧೀಕಾರಿಯವರು ಸಮಜಾಯಿಷಿ ನೀಡಿ ನೇಮ್ ಪ್ಲೇಟ್‌ನ ವ್ಯವಸ್ಥೆ ಮಾಡಿದರು. ಆದರೆ, ಇದೇ ವಿಷಯ ಬಹುತೇಕ ಸಮಯ ನುಂಗಿ ಹಾಕಿತು.