

ಲಕ್ಷ್ಮೇಶ್ವರ: ಬರ ಘೋಷಣೆ, ಬೆಳೆಹಾನಿ ಪರಿಹಾರ, ಬೆಳೆವಿಮೆ, ಸಾಲ ಮರುಪಾವತಿಗೆ ರಿಯಾಯಿತಿ ನೀಡುವುದು ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ರೈತಪರ ಸಂಘಟನೆಗಳ ವತಿಯಿಂದ ಆ.28ರಂದು ಲಕ್ಷ್ಮೇಶ್ವರ ಬಂದ್‌ಗೆ ಕರೆ ನೀಡಲಾಗಿದೆ ಎಂದು ಪಕ್ಷಾತೀತ ರೈತ ಹೋರಾಟ ವೇದಿಕೆ ತಾಲೂಕು ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಒಣಗಿರುವ ಬೆಳೆಗಳಿಗೆ ಬೆಳೆಹಾನಿ ಪರಿಹಾರ, ಮಧ್ಯಂತರ ಬೆಳೆವಿಮೆ ಪಾವತಿ, ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರ ಸಂಘಗಳ ಬೆಳೆಸಾಲ ಮನ್ನಾ, ಬ್ಯಾಂಕುಗಳು ಸಾಲ ಮರುಪಾವತಿಗೆ ನೀಡುವ ನೋಟಿಸ್ ಸ್ಥಗಿತಗೊಳಿಸಬೇಕು. 7 ತಾಸು ಹಗಲಿನಲ್ಲಿಯೇ ತ್ರೀಫೇಸ್ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿ ಹೋರಾಟ ಕೈಗೊಳ್ಳಲಾಗಿದೆ. ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದರು.
ಕಿಸಾನ ಜಾಗೃತಿ ಸಂಘದ ತಾಲೂಕಾಧ್ಯಕ್ಷ ಶಿವಾನಂದ ಲಿಂಗಶೆಟ್ಟಿ, ಭಾರತಿಯ ಕಿಸಾನ್ ಸಂಘದ ತಾಲೂಕಾಧ್ಯಕ್ಷ ಟಾಕಪ್ಪ ಸಾತಪುತೆ, ಕೃಷಿಕ ಸಮಾಜ (ನವದೆಹಲಿ) ರಾಷ್ಟ್ರಿಯ ರೈತ ಸಂಘಟನೆಯ ತಾಲೂಕಾಧ್ಯಕ್ಷ ಚನ್ನಪ್ಪ ಷಣ್ಮುಕಿ, ಆನಂದ ಅಮರಶೆಟ್ಟಿ, ಖಾನಸಾಬ್ ಸೂರಣಗಿ, ಕರಿಯಪ್ಪ ಹುರನವರ, ಇತರರಿದ್ದರು.