

ಪಾಂಡವಪುರ: ತಾಲೂಕಿನ ಚಿಕ್ಕಮರಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಲಕ್ಷ್ಮಣಶೆಟ್ಟಿ, ಉಪಾಧ್ಯಕ್ಷರಾಗಿ ಸಿ.ಕೆ.ನಿಂಗೇಗೌಡ ಅವರು ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.
ಸಂಘದ ನೂತನ ಆಡಳಿತ ಮಂಡಳಿಯ ತೆರವಾದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಿಗದಿಯಾಗಿತ್ತು. ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಣಶೆಟ್ಟಿ ಹಾಗೂ ಸಿ.ಪ್ರಕಾಶ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಿ.ಕೆ.ನಿಂಗೇಗೌಡ ಹಾಗೂ ಸೌಭಾಗ್ಯಮ್ಮಾ ನಾಮಪತ್ರ ಸಲ್ಲಿಸಿದ್ದರು. ಬಳಿಕ ನಾಮಪತ್ರ ವಾಪಸ್ ತೆಗೆದುಕೊಳ್ಳಲು ನೀಡಿದ ಸಮಯಾವಕಾಶದಲ್ಲಿ ಅಧ್ಯಕ್ಷ ಸ್ಥಾನದಿಂದ ಸಿ.ಪ್ರಕಾಶ್ ಮತ್ತು ಉಪಾಧ್ಯಕ್ಷ ಸ್ಥಾನದಿಂದ ಸೌಭಾಗ್ಯಮ್ಮಾ ನಾಮಪತ್ರ ವಾಪಸ್ ಪಡೆದರು. ಅಂತಿಮವಾಗಿ ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಣಶೆಟ್ಟಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಿ.ಕೆ.ಕುಳ್ಳೇಗೌಡ ಅವರ ನಾಮಪತ್ರಗಳು ಬಾಕಿ ಉಳಿದ ಹಿನ್ನೆಲೆಯಲ್ಲಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ನಿರ್ಮಲಾ ಅವರು ಘೋಷಿಸಿದರು.
ನೂತನ ಅಧ್ಯಕ್ಷ ಲಕ್ಷ್ಮಣಶೆಟ್ಟಿ, ಉಪಾಧ್ಯಕ್ಷ ಸಿ.ಕೆ.ನಿಂಗೇಗೌಡ ಅವರನ್ನು ಎಲ್ಲ ನಿರ್ದೇಶಕರು, ತಾಪಂ ಮಾಜಿ ಸದಸ್ಯೆ ಮಂಗಳಾ ನವೀನ್ ಸೇರಿದಂತೆ ಎಲ್ಲ್ಲ ಮುಖಂಡರು ಗ್ರಾಮಸ್ಥರು ಅಭಿನಂದಿಸಿದರು.
ನಿರ್ದೇಶಕರಾದ ಪಿ.ರಮೇಶ್, ಸಿ.ಪಿ.ಮಹದೇವಶೆಟ್ಟಿ(ಕ್ಯಾತಶೆಟ್ಟಿ), ಸಿ.ಎನ್.ಉಮೇಶ್, ಕೆ.ಕಂಚಯ್ಯ, ಸಿ.ಪ್ರಕಾಶ್, ಸಿ.ರಾಜಶೇಖರ್, ಸಿ.ಎನ್.ಪುಷ್ಪಾ, ಸೌಭಾಗ್ಯಮ್ಮಾ ಸೇರಿದಂತೆ ಹಲವರು ಹಾಜರಿದ್ದರು.