

ಬೆಳಗಾವಿ : ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ವಿರುದ್ಧ ಬಿಜೆಪಿಯವರು ಸಂಘಟಿತರಾಗಿ ಕೆಲಸ ಮಾಡಿದ್ದರ ಜತೆಗೆ ದುಡ್ಡಿನ ಹೊಳೆ ಹರಿಸಿದ್ದರಿಂದ ಸೋಲಾಗಿದೆ. ಹಿರಿಯ ರಾಜಕಾರಣಿ ಆರಿಸಿ ಬರಬೇಕು ಎಂಬ ಆಸೆ ಇತು.್ತ ನಮಗೂ ಬೇಸರವಾಗಿದೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಾಜಿ ಸಿಎಂ ಶೆಟ್ಟರ್ ಅವರನ್ನೂ ಅಗೌರವದಿಂದ ನಡೆಸಿಕೊಂಡಿದ್ದಕ್ಕೆ ಹಾಗೂ ಬಿಜೆಪಿ ನಡವಳಿಕೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯತ ಸಮುದಾಯ ಕಾಂಗ್ರೆಸ್ ಪರ ವಾಲಿದ್ದಾರೆ ಎಂಬಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಇನ್ನು ಅಥಣಿ ಸೇರಿದಂತೆ ಬೆಳಗಾವಿ ಜಿಲ್ಲೆ ಅಭೂತಪೂರ್ವ ಗೆಲುವು ಸಾಧಿಸಲು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಹಿರಿಯರು, ಮತದಾರ ಆಶೀರ್ವಾದ ಗೆಲುವಿಗೆ ಕಾರಣ. ಅವರೆಲ್ಲರನ್ನೂ ಧಿಕ್ಕರಿಸಿ ಮುಂದೆ ಬರಲು ನಾನೇನು ಬ್ರಹ್ಮನೂ ಅಲ್ಲ, ಬೇರೆಯವರ ರೀತಿ ನಾನು ದೊಡ್ಡ ನಾಯಕನೂ ಅಲ್ಲ’ ಎಂದು ಪ್ಟಕ್ಷವಾಗಿ ರಮೇಶ ಜಾರಕಿಹೊಳಿಗೆ ಟಾಂಗ್ ಕೊಟ್ಟರು.
ಪ್ರಚಾರ ವೇಳೆ ಲಕ್ಷ್ಮಣ ಸವದಿಗೆ ಕಬ್ಬು ಹೇರಲು ಕಳಿಸೋಣ ಎಂಬ ರಮೇಶ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆಧುನಿಕ ಯುಗದಲ್ಲಿ ಕಬ್ಬು ಕಡಿಯುವ ಜನರು ಕಡಿಮೆ ಆಗಿದ್ದು ಮಷಿನ್ ಬಂದಿದೆ. ನಿನ್ನೆಯ ಅಭಿನಂದನೆ ಸಮಾರಂಭದಲ್ಲಿ ಕಬ್ಬು ಕಡಿಯುವ ಮಷಿನ್ ತಂದು ಪೂಜೆ ಮಾಡಿಸಿದ್ದಾರೆ. ಆ ಬಗ್ಗೆ ಚರ್ಚೆ ಮಾಡುವುದು ಅನವಶ್ಯಕ. ಇನ್ನು ಸವದಿಯನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದಿಂದ ಕೆಳಗಿಳಿಸುತ್ತೇವೆ ಎಂಬ ಹೇಳಿಕೆಗೂ ಪ್ರತಿಕ್ರಿಯಿಸಿದ ಸವದಿ, ‘ಅವರಿಗೆ ಬೇಕಾದ್ದನ್ನು ಅವರು ಮಾಡಲಿ, ನಮಗೆ ಸರಿ ಅನಿಸಿದ್ದನ್ನು ನಾವು ಮಾಡುತ್ತೇವೆ. ನಾನು ನಿರಂತರ ಪಕ್ಷ ಸಂಘಟನೆಯ ಸ್ವಭಾವ ರೂಢಿಸಿಕೊಂಡಿದ್ದು, ಮುಂದಿನ ಬಾರಿ 18 ಕ್ಷೇತ್ರಕ್ಕೂ ಗೆಲುವು ವಿಸ್ತರಿಸಲು ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದರು.