

ಮೈಸೂರು: ಕಾರ್ತಿಕ ಮಾಸದ ಪ್ರಯುಕ್ತ ಹೆಬ್ಬಾಳಿನ ಲಕ್ಷ್ಮೀಕಾಂತ ದೇವಸ್ಥಾನದಲ್ಲಿ ಸೋಮವಾರ ಲಕ್ಷ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು.
ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾನಂದಾಜಿ, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀಸೋಮೇಶ್ವರ ನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ದೇವಸ್ಥಾನದ ಆವರಣದಲ್ಲಿ ನೆರದಿದ್ದ ಸಾವಿರಾರು ಭಕ್ತರು, ಜ್ಯೋತಿ ಬೆಳಗಿಸಿದರು.
ಆದಿಚುಂಚನಗಿರಿ ಮಹಾ ಸಂಸ್ಥಾಪನ ಮಠದ ವ್ಯಾಪ್ತಿಯಲ್ಲಿರುವ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಲಕ್ಷ್ಮೀಕಾಂತ ಸ್ವಾಮಿಗೆ ಮುಂಜಾನೆ 7 ಗಂಟೆಗೆ ಅಭಿಷೇಕ, ವಿಶೇಷ ಅಲಂಕಾರ ನೆರವೇರಿಸಲಾಯಿತು. ಸಂಜೆ 4 ಗಂಟೆಗೆ ಸುದರ್ಶನ ಹೋಮ ನಡೆಸಿ ಪೂರ್ಣಾಹುತಿ ನೀಡಲಾಯಿತು.
ಬಳಿಕ ಲಕ್ಷ್ಮೀಕಾಂತ ಸ್ವಾಮಿ ಉತ್ಸವ ದೇವಸ್ಥಾನದ ಸುತ್ತಲಿನ ರಸ್ತೆಗಳಲ್ಲಿ ನಡೆದು ಸಾವಿರಾರು ಭಕ್ತರು ದೇವರ ದರ್ಶನ ಪಡೆದರು. ಸಂಜೆ 6 ಗಂಟೆಯಾಗುತ್ತಿದ್ದಂತೆ ಕುಂಬಾರಕೊಪ್ಪಲು, ಮಂಚೇಗೌಡನ ಕೊಪ್ಪಲು, ಹೆಬ್ಬಾಳು ಸೇರಿದಂತೆ ಸುತ್ತಲಿನ ಭಾಗದಿಂದ ಆಗಮಿಸಿದ ಭಕ್ತರು, ದೇವಸ್ಥಾನದ ಆವರಣದಲ್ಲಿ ದೀಪಗಳನ್ನು ಬೆಳಗಿದರು.