

ವಿಜಯವಾಣಿ ಸುದ್ದಿಜಾಲ ಗದಗ
ವಿದ್ಯಾಥಿರ್ಗಳು ಜೀವನದಲ್ಲಿ ಸೋಲನ್ನು ಸ್ವೀಕರಿಸುವುದನ್ನು ಕಲಿಯಬೇಕು. ಕೇವಲ ಗೆಲುವನ್ನು ಸಂಭ್ರಮಿಸುವು ಕ್ರೀಡಾ ಮನೋಭಾವ ಅಲ್ಲ. ಯಾರೇ ಗೆದ್ದರು ಅವರನ್ನು ಪ್ರೋತ್ಸಾಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಹೇಳಿದರು.
ನಗರದ ಚಿಕ್ಕಟ್ಟಿ ಶಾಲೆಯಲ್ಲಿ ಸೋಮವಾರ ಜರುಗಿದ ಲಕ್ಕುಂಡಿ ವಲಯ ಮಟ್ಟದ ಕ್ರೀಡಾಕೂಟ ಕಾರ್ಯಕ್ರಮದ ಧ್ವಜಾರೋಹಣ ನೇರವೆರಿಸಿ ಮಾತನಾಡಿದ ಅವರು, ಮಕ್ಕಳು ಯಾವುದಾದರು ಒಂದು ಆಟದಲ್ಲಿ ಆಸಕ್ತಿ ವಹಿಸಬೇಕು. ನಿರಂತರವಾಗಿ ಆಡಬೇಕು. ಚಿಕ್ಕಟ್ಟಿ ಶಾಲೆಯ ಸುಂದರವಾದ ಪರಿಸರದಲ್ಲಿ ಈ ಕ್ರೀಡಾಕೂಟಗಳು ನಡೆಯುತ್ತಿರುವುದು ಸಂತೋಷದ ಸಂಗತಿ ಎಂದು ಹೇಳಿದರು.
ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಗ್ರಾಮೀಣ ವಲಯದ ಸಮನ್ವಯ ಅಧಿಕಾರಿ ಜೆ. ಎ. ಬಾವಿಕಟ್ಟಿ, ನಿರಂತರ ಪರಿಶ್ರಮದಿಂದ ದೇಹ, ಮನಸ್ಸು ವಿಲ್ಲಾಸಗೊಂಡು ಬದುಕಿನ ಸಮಸ್ಯೆಗಳನ್ನು ಎದುರಿಸುವ ಶಕ್ತಿಯನ್ನು, ಆತ್ಮ ವಿಶ್ವಾಸವನ್ನು ವೃದ್ಧಿಗೊಳಿಸುವಂತಹ ಕಾರ್ಯವನ್ನು ಕ್ರೀಡೆಗಳು ಮಾಡುತ್ತವೆ. ಅಷ್ಟೆ ಅಲ್ಲದೇ ನಮ್ಮ ವಿದ್ಯಾಥಿರ್ಗಳಿಗೆ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಸಾಮರ್ಥ್ಯವಿದೆ. ಅದನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ನಿವೃತ್ತ ಉಪನಿರ್ದೇಶಕ ಎ. ಎನ್. ನಾಗರಳ್ಳಿ ಮಾತನಾಡಿ, ಕ್ರೀಡೆ ಜೀವನದ ಒಂದು ಅವಿಭಾಜ್ಯ ಅಂಗ. ಕ್ರೀಡೆಗಳು ನಮ್ಮನ್ನು ಸದೃಢ ಮತ್ತು ಕ್ರಿಯಾ ಶೀಲರನ್ನಾಗಿಸುತ್ತವೆ ಎಂದರು
ಎಸ್. ವೈ. ಚಿಕ್ಕಟ್ಟಿ, ವಿಜಯಾ ಅಂಗಡಿ, ಗಣೇಶ ಬಡ್ನಿ, ಯಲ್ಲಮ್ಮಾ ಮಡಿವಾಳರ, ಟಿ. ಎಸ್. ಪವಾರ, ಎನ್. ಗದ್ದಿಗೌಡರ, ಚಂದ್ರಶೇಖರ, ವೈ. ಕೆ. ಚೌಡಾಪುರ, ಶಾರಾಧಾ ಬಂಡಿ, ಶಂಕರ ಹಡಗಲಿ, ಮಾಂತೇಶ ಪೂಜಾರ, ವಿ. ಸಿ. ಕಾಳೆ, ಶೋಭಾ ಸ್ಥಾವರಮಠ ಹಲವರು ಇದ್ದರು.