

ವಿಜಯವಾಣಿ ಸುದ್ದಿಜಾಲ ಗದಗ
ಸೈನಿಕರ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದೇಶಭಕ್ತರನ್ನು ಸ್ಮರಿಸುವ ಸ್ವಾತಂತ್ರ್ಯ ಸಂಭ್ರಮ ಮತ್ತು ಸೈನಿಕರ ಮನದ ಮಾತುಗಳ ಕಾರ್ಯಕ್ರಮ ಹಮ್ಮಿಕೊಂಡಿರುವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾನೀಯ ಎಂದು ಹರ್ಲಾಪೂರದ ಡಾ. ಕೊಟ್ಟೂರೇಶ್ವರ ಶ್ರೀಗಳು ಹೇಳಿದರು.
ತಾಲೂಕಿನ ಲಕ್ಕುಂಡಿ ಗ್ರಾಮದ ಅಲ್ಲಮಪ್ರಭುದೇವರ ಮಠದಲ್ಲಿ ಭಾನುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸೈನಿಕರು ಭಗವಂತನ ಸ್ವರೂಪಿಗಳಾಗಿದ್ದು, ಅವರ ಆತ್ಮಸ್ಥೆರ್ಯ ಮೆಚ್ಚಬೇಕು. ನಮ್ಮ ಇಷ್ಟಲಿಂಗ ಪೂಜೆಗಿಂತ ಸೈನಿಕರ ಆತ್ಮ ವಿಶ್ವಾಸ ಶ್ರೇಷ್ಠ. ಯುವಕರು ಸಿನಿಮಾ ನಟರನ್ನು ಹೀರೋಗಳಂತೆ ಬಿಂಬಿಸುವುದನ್ನು ಬಿಟ್ಟು ನಮ್ಮ ದೇಶದ ಗಡಿ ಕಾಯುವ ಸೈನಿಕರನ್ನು ಹಿರೋಗಳೆಂದು ಒಪ್ಪಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ದೇಶ ಎನ್ನುವುದು ಅದ್ಭುತ ಪರಿಕಲ್ಪನೆ. ಇಂತಹ ದೇಶವನ್ನು ಕಾಯುವ ಕ್ರೀಯೆ ಸುಲಭಲ್ಲ. ಆದ್ದರಿಂದ ಸೈನಿಕರ ಬಗ್ಗೆ ಗೌರವ ಇಟ್ಟುಕೊಂಡು ಮುಂದಿನ ಪೀಳಿಗೆ ದೇಶ ಸೇವೆ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದರು.
ಸಿದ್ದಲಿಂಗೇಶ್ವರ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು. ಪ್ರಾಚಾರ್ಯ ನೀಲಕಂಠ ಮರಡಿ ಮಾತನಾಡಿದರು. ನಿವೃತ್ತ ಸೈನಿಕರಾದ ದತ್ತಣ್ಣ ಜೋಶಿ, ಪರಸಪ್ಪ ಗುಂಡಳ್ಳಿ, ಮಹಾಂತೇಶ ಚವಡಿ, ಹನುಮಂತಪ್ಪ ಭಜಂತ್ರಿ, ದೇವೇಂದ್ರಪ್ಪ ತಹಶೀಲ್ದಾರ, ಬಸವರಾಜ ಕುಕನೂರು, ಮುಜರಪ್ಪ ಮುಳ್ಳಾಳ, ಷಡರಯ್ಯ ಮುಳಕೊಂಪಿಮಠ ಅವರನ್ನು ಸನ್ಮಾನಿಸಲಾಯಿತು.
ಶಿಕ್ಷಕ ಅಶೋಕ ಬೂದಿಹಾಳ, ರಶ್ಮಿ ಅಂಗಡಿ, ಬಸವರಾಜ ನೆಲಜೇರಿ, ಕೆ. ಎಸ್. ಪೂಜಾರ, ಪುಷ್ಪಾ ಪಾಟೀಲ, ಶಿವು ಭಜಂತ್ರಿ, ರತ್ನಕ್ಕ ಪಾಟೀಲ, ಜ್ಯೋತಿ ಹೇರಲಗಿ ಇತರರು ಇದ್ದರು.