

ರಬಕವಿ-ಬನಹಟಿ: ತಾಲೂಕಿನ ಆಸಂಗಿ ಗ್ರಾಮದ ಆರಾಧ್ಯದೇವಿ ಲಕ್ಕವ್ವ ತಾಯಿ ಉಡಿ ತುಂಬುವ ಹಾಗೂ ನೈವೇದ್ಯ ಜಾತ್ರೆ ವಿವಾದದ ನಡುವೆಯೂ ಶುಕ್ರವಾರ ಸಂಭ್ರಮ ಸಡಗರದಿಂದ ಜರುಗಿತು.
ಬೆಳಗ್ಗೆ 4 ಗಂಟೆಯಿಂದ ಧಾರ್ಮಿಕ ಕಾರ್ಯಗಳು ಆರಂಭವಾಗಿದ್ದು, ಬೆಳಗ್ಗೆ 7 ಗಂಟೆ ನಂತರ ಸಾವಿರಾರು ಮಹಿಳೆಯರು ಕೀಮಿ ನಷ್ಟು ಸರದಿಯಲಿ ನಿಂತು ದೇವಿಗೆ ಉಡಿ ತುಂಬಿ, ಸೀರೆ, ಕುಪ್ಪಸ ಉಡಿಸಿ ಕಡಬು, ಹೋಳಿಗೆ ನೈವೇದ್ಯ ಅರ್ಪಿಸಿದರು.
ಈ ರೀತಿ ಸಂಗ್ರಹವಾದ ಸೀರೆಗಳನ್ನು ದೇವಸ್ಥಾನದ ಆಡಳಿತ ಮಂಡಳಿಯವರು ದೇವರ ಹೆಸರಿನಿಂದ ಸವಾಲು ಮಾಡಿ ಬಂದ ಹಣವನ್ನು ದೇವಸ್ಥಾಣದ ಅಭಿವೃದ್ಧಿಗೆ ಬಳಸುವುದು ವಾಡಿಕೆ. ಈ ಬಾರಿ ಅಂದಾಜು 5 ಸಾವಿರಕ್ಕೂ ಅಧಿಕ ಬೆಲೆ ಬಾಳುವ ಉತ್ತಮ ಗುಣಮಟ್ಟದ ಸೀರೆಗಳು ಸಂಗ್ರಹವಾಗಿವೆ.
ಪ್ರತಿ ವರ್ಷ ಜಾತ್ರೆ ಸಂದರ್ಭದಲ್ಲಿ ಲಕ್ಕವ್ವ ದೇವಿಗೆ ಪ್ರಾಣಿ ಬಲಿ ನೀಡಲಾಗುತಿತ್ತು ಎಂದು ಹೇಳಲಾಗುತ್ತದೆ. ಆದರೆ, ಪ್ರಸಕ್ತ ವರ್ಷ ಪೊಲೀಸ್ ಬಂದೋಬಸ್ತಿನಲ್ಲಿ ಜಾತ್ರೆ ಜರುಗಿದ್ದು, ಈ ಬಾರಿ ಯಾವ ಸ್ಥಳದಲ್ಲೂ ಪ್ರಾಣಿಗಳ ಬಲಿ ನಡೆದಿಲ್ಲ ಎಂದು ಬನಹಟ್ಟಿ ಪೊಲೀಸ್ ಠಾಣೆ ಪಿಎಐ ಶಾಂತಾ ಹಳ್ಳಿ ಪತ್ರಿಕೆಗೆ ತಿಳಿಸಿದ್ದಾರೆ.
ದೇವಸ್ಥಾನದ ಕೂಗಳತೆಯಲ್ಲಿರುವ ದೇವಿಯ ಪಾದಗಟ್ಟೆ ಎಂದು ಭಕ್ತರು ಗುರುತಿಸಿಕೊಂಡಿರುವ ಸ್ಥಳ ಎರಡು ಸಮೂದಾಯದವರ ಸ್ವಜನಾಂಗದವರಿಂದ ವಿವಾದಾತ್ಮಕವಾಗಿದ್ದು, ಅಹಿಂಸಾ ಪರಮೋಧರ್ಮ ಎಂದು ಬದುಕುವವರು ನಾವು ಪ್ರಾಣಿ ಬಲಿ ನಿಲ್ಲಿಸುತ್ತೇವೆ ಎಂದು ಹೇಳಿದ್ದರ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ನಡುವೆ ಹೋಳಿಗೆ, ಕಡಬು ನೈವೇದ್ಯ ಮಾಡಲಾಯಿತು. ಜತೆಗೆ ದೇವರಿಗೆ ಬುಟ್ಟಿಗಳಲ್ಲಿ ತರುವ ನೈವೇಧ್ಯವನ್ನು ಪೊಲೀಸರು ಪರಿಶೀಲನೆ ಮಾಡಿ ದೇವಸ್ಥಾನದ ಒಳಕ್ಕೆ ಬಿಡುತ್ತಿದ್ದರು.