ಲಕ್ಷಾಂತರ ರೂ. ಖೋಟಾ ನೋಟು ವಶ, ಬಂಧಿತರಿಂದ ಮತ್ತಷ್ಟು ಪ್ರಕರಣಗಳು ಬೆಳಕಿಗೆ

NOTE
Published on

ಬಂಟ್ವಾಳ: ಖೋಟಾ ನೋಟುಗಳನ್ನು ಚಲಾವಣೆಗೊಳಿಸಲು ಯತ್ನಿಸಿದ ಸಂದರ್ಭ ಬಂಧನಕ್ಕೊಳಗಾಗಿದ್ದ ಆರೋಪಿಗಳಿಂದ ಮತ್ತೊಮ್ಮೆ ಲಕ್ಷಾಂತರ ರೂ. ಮೌಲ್ಯದ ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಜಾಲದ ಪತ್ತೆಗಾಗಿ ಬಂಟ್ವಾಳ ಪೊಲೀಸರ ತಂಡ ಕೇರಳಕ್ಕೆ ತೆರಳಿದೆ.

ಕೇರಳದಿಂದ ಆಗಮಿಸಿ ಕರ್ನಾಟಕದಲ್ಲಿ ಖೋಟಾ ನೋಟುಗಳನ್ನು ಚಲಾವಣೆ ಮಾಡಲು ಯತ್ನಿಸಿದ್ದ ಮೊಹಮ್ಮದ್ ಸಿ.ಎ ಹಾಗೂ ಕಮರುನ್ನೀಸಾ ಎಂಬುವರನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದು, 23 ಸಾವಿರ ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದರು.

ಹೆಚ್ಚಿನ ತನಿಖೆ ನಡೆಸಿದ್ದ ಸಂದರ್ಭ ಇನ್ನೂ ಹೆಚ್ಚಿನ ವಿಚಾರಗಳನ್ನು ಬಂಧಿತರು ಬಾಯಿಬಿಟ್ಟಿದ್ದು, ಆರೋಪಿಗಳ ಬಳಿಯಿದ್ದ 2,30,000 ರೂ.ಮೌಲ್ಯದ 500 ಮುಖಬೆಲೆಯ 460 ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರಿಂದ ವಶಪಡಿಸಿಕೊಂಡ ಖೋಟಾ ನೋಟುಗಳ ಸಂಖ್ಯೆ 506ಕ್ಕೆ ಏರಿಕೆಯಾಗಿದ್ದು, ಜತೆಗೆ 6 ಲಕ್ಷ ರೂ. ಮೌಲ್ಯದ ಕಾರು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಂಟ್ವಾಳ ಪೊಲೀಸರ ಕಾರ್ಯಕ್ಕೆ ಪೊಲೀಸ್ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದು, ನಗದು ಬಹುಮಾನ ಘೋಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net