ಬೇಸಿಗೆ ಮುನ್ನವೇ ಬತ್ತಿದ ಕೆರೆಗಳು

BUDIKOTE
Published on

ಜಿ.ನಾಗರಾಜ್​ ಬೂದಿಕೋಟೆ: ಬೇಸಿಗೆ ಆರಂಭಕ್ಕೂ ಮೊದಲೇ ಕೆರೆ&ಕುಂಟೆಗಳಲ್ಲಿ ನೀರು ಬತ್ತಿ ಹೋಗುತ್ತಿದ್ದು, ಈಗಾಗಲೇ ಬಹುತೇಕ ಸಣ್ಣಪುಟ್ಟ ಕೆರೆ ಕುಂಟೆಗಳು ಖಾಲಿಯಾಗಿವೆ. ಬೆರಳೆಣಿಕೆಯಷ್ಟು ಕೆರೆಗಳಲ್ಲಿ ಮಾತ್ರ ಅಲ್ಪ ಸ್ವಲ್ಪ ನೀರಿದ್ದು, ಪರಿಸ್ಥಿತಿ ಹೀಗೆ ಮುಂದುವರಿರೇ ಭವಿಷ್ಯದಲ್ಲಿ ನೀರಿಗಾಗಿ ಪರದಾಡುವ ದುಸ್ಥಿತಿ ಎದುರಾಗಬಹುದು.

ನದಿ ನಾಲೆಗಳಿಲ್ಲದ ಕೋಲಾರ ಜಿಲ್ಲೆ ಜನತೆಗೆ ಕೆರೆ ಕುಂಟೆಗಳೇ ನೀರಿನ ಮೂಲವಾಗಿದ್ದು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಜನರ ಕುಡಿಯಲು ನೀರಿನ ನೆಲೆಗಳಾಗಿವೆ. ಕೆರೆಕುಂಟೆಗಳು ಭರ್ತಿಯಾದರೆ ಮಾತ್ರ ಅಂತರ್ಜಲ ವೃದ್ಧಿಯಾಗಿ ರೈತರ ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗಲಿದೆ. ಜಿಲ್ಲೆಯಲ್ಲಿ ಸಾವಿರಾರು ಕೆರೆಕುಂಟೆಗಳಿದ್ದು, ಈ ಬಾರಿ ಜಿಲ್ಲೆಯಲ್ಲಿ ಸಮರ್ಪಕ ಮಳೆಯಾಗದ ಕಾರಣ ಕೆರೆ ಕುಂಟೆಗಳು ಭರ್ತಿಯಾಗಲಿಲ್ಲ. ಬಿದ್ದ ಅಲ್ಪಸ್ವಲ್ಪ ಮಳೆಗೆ ಶೇಖರಣೆಯಾಗಿದ್ದ ನೀರು ಖಾಲಿಯಾಗುತ್ತಿದ್ದು, ಬಹುತೇಕ ಕೆರೆಗಳು ನೀರಿಲ್ಲದೆ ಬಣಗುಡುತ್ತಿವೆ. ಬೇಸಿಗೆ ಆರಂಭಕ್ಕೂ ನೀರು ಖಾಲಿಯಾಗಿರುವ ಕಾರಣ ಅಂತರ್ಜಲ ಕುಸಿತಗೊಂಡು ಬೇಸಿಗೆಯಲ್ಲಿ ನೀರಿನ ಭವಣೆ ಉಂಟಾಗಬಹುದು ಎಂಬ ಆತಂಕ ಎದುರಾಗಿದೆ.

ಜಿಲ್ಲೆಯ ರೈತರು ಬೇಸಾಯಕ್ಕೆ ಕೊಳವೆ ಬಾವಿಗಳನ್ನೇ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿಸಿದ್ದು, ಮುಂದಿನ ದಿನಗಳಲ್ಲಿ ಅಂತರ್ಜಲ ಕುಸಿದು ಕೊಳವೆ ಬಾವಿಗಳು ಸಹ ಕೈಕೊಡಬಹುದಾಗಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಸಮಸ್ಯೆ ಉಂಟಾಗಬಹುದು. ಕೊಳವೆ ಬಾವಿಗಳು ಖಾಲಿಯಾದರೆ ಜನತೆಗೆ ಟ್ಯಾಂಕರ್​ ಮೂಲಕ ನೀರು ಪೂರೈಸಬಹುದು. ಆದರೆ ಕೆರೆ ಕುಂಟೆಗಳಲ್ಲಿ ನೀರು ಖಾಲಿಯಾಗುತ್ತಿರುವ ಕಾರಣ ಪ್ರಾಣಿ&ಪಕ್ಷಿ ಮತ್ತು ಜಾನುವಾರುಗಳದ್ದೇ ದೊಡ್ಡ ಚಿಂತೆಯಾಗಿದೆ.

ಗ್ರಾಮೀಣ ಭಾಗದ ಜನರು ದನಕರುಗಳು, ಕುರಿ&ಮೇಕೆಗಳನ್ನು ಮೇವಿಗಾಗಿ ಬಯಲು ಪ್ರದೇಶಕ್ಕೆ ಕರೆದುಕೊಂಡು ಹೋಗುವುದು ರೂಢಿ. ಜಾನುವಾರುಗಳನ್ನು ಮೇಯಿಸಿಕೊಂಡು ನೀರು ಕುಡಿಸಲು ಕೆರೆಕುಂಟೆಗಳನ್ನೇ ಅವಲಂಬಿಸಿದ್ದಾರೆ. ಪ್ರಸ್ತುತ ಅಲ್ಪಸ್ವಲ್ಪ ನೀರಿರುವ ಕಾರಣ ಸಮಸ್ಯೆ ಎದುರಾಗಿಲ್ಲ. ಆದರೆ, ಮಾರ್ಚ್​&ಏಪ್ರಿಲ್​ನಲ್ಲಿ ಆರಂಭವಾಗುವ ಬಿರು ಬಿಸಿಲಿಗೆ ನೀರಿನ ಸಮಸ್ಯೆ ಎದುರಾಗಲಿದೆ. ಸಹಜವಾಗಿಯೇ ಕೆರೆಯೊಡಲು ಬತ್ತುತ್ತವೆ. ಆದ ಕಾರಣ ಬೇಸಿಗೆ ಆರಂಭವಾದರೆ ಜಾನುವಾರುಗಳ ನೀರಿಗೆ ಪರದಾಟ ಅನಿವಾರ್ಯ ಆಗಬಹುದಾಗಿದೆ.

ಯರಗೋಳ್​ ಡ್ಯಾಂನಲ್ಲಿ ನೀರು ಲಭ್ಯವಿರುವ ಕಾರಣ ಮಾಲೂರು, ಬಂಗಾರಪೇಟೆ, ಕೋಲಾರದ ಜನತೆಗೆ ಕುಡಿಯುವ ನೀರಿಗೆ ಸಮಸ್ಯೆ ಕಾಡುವುದಿಲ್ಲ. ಆದರೆ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಅಭಾವ ತಲೆದೊರಬಹುದು. ಜತೆಗೆ ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ನೀರಿನ ಸಮಸ್ಯೆ ಬಿಗಡಾಯಿಸುವ ಮುನ್ಸೂಚನೆ ಇದ್ದು, ಅಧಿಕಾರಿಗಳು ಈಗಲೇ ಎಚ್ಚೆತ್ತುಕೊಂಡು ಬೇಸಿಗೆ ಎದುರಿಸಲು ಸೂಕ್ತ ಕ್ರಮ ತೆಗೆದುಕೊಂಡರೆ ಉತ್ತಮ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

"ಬೇಸಿಗೆ ಆರಂಭಕ್ಕೆ ಇನ್ನೂ ಒಂದು ತಿಂಗಳು ಬಾಕಿ ಇದ್ದರೂ ಸಹ ಈಗಾಗಲೇ ಕೆರೆಕುಂಟೆಗಳು ಖಾಲಿಯಾಗುತ್ತಿವೆ. ಇದನ್ನು ನೋಡುತ್ತಿದ್ದರೆ ಬೇಸಿಗೆಯಲ್ಲಿ ಜನ ಹಾಗೂ ಜಾನುವಾರುಗಳಿಗೆ ನೀರಿನ ಅಭಾವ ಉಂಟಾಗಬಹುದು. ಆದ್ದರಿಂದ ಪಂಚಾಯಿತಿ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಗೆ ವಹಿಸುವುದು ಉತ್ತಮ."

- ರಾಮರೆಡ್ಡಿ, ರೈತ

"ಬೇಸಿಗೆಯಲ್ಲಿ ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗದಂತೆ ಪಂಚಾಯಿತಿಯಿಂದ ನಿರ್ಮಿಸಲಾಗಿರುವ ನೀರಿನ ತೊಟ್ಟಿಗಳಿಗೆ ನೀರನ್ನು ಪೂರೈಸಿ ಮುಂಜಾಗ್ರತೆ ವಹಿಸಲಾಗುತ್ತದೆ. ಜನತೆಗೆ ನೀರಿನ ಸಮಸ್ಯೆ ಎದುರಾದರೆ ಟ್ಯಾಂಕರ್​ ಮೂಲಕ ನೀರನ್ನು ಸರಬರಾಜು ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ."

- ಮಧುಚಂದ್ರ

ಪಿಡಿಒ ಬಲಮಂದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net