ಕೆರೆಗಳ ಹೂಳೆತ್ತಿಸಲು ಕ್ರಮ ಕೈಗೊಳ್ಳಿ: ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸೂಚನೆ

Adc Meeting
Published on

ಮಂಡ್ಯ: ಮಳೆಗಾಲ ಪ್ರಾರಂಭವಾಗುತ್ತಿರುವುದರಿಂದ ಬಾಕಿ ಇರುವ ಕೆರೆಗಳ ಹೂಳೆತ್ತಿಸಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 962 ಕೆರೆಗಳನ್ನು ಈಗಾಗಲೇ ಗುರುತಿಸಿದ್ದೇವೆ. ಅವುಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯಮಟ್ಟದ ಸಮಿತಿಯಿಂದ ನಿರ್ದೇಶನ ಹಾಗೂ ಉಚ್ಚನ್ಯಾಯಾಲಯದ ರೀತಿ ನಮ್ಮ ಜಿಲ್ಲೆಯಲ್ಲೂ ಕೂಡ ಒಂದು ಜಿಲ್ಲಾ ಮಟ್ಟದ ಸಮಿತಿಯನ್ನು ಮಾಡಲಾಗಿದೆ. ಜಿಲ್ಲಾ ಪಂಚಾಯಿತಿ, ಸಣ್ಣ ನೀರಾವರಿ ಇಲಾಖೆ, ಕಾವೇರಿ ನೀರಾವರಿ ನಿಗಮ ಇಲಾಖೆ, ಹೇಮಾವತಿ ಎಡದಂಡೆ ನಾಲಾ ವಿಭಾಗದ ವ್ಯಾಪ್ತಿಗೆ ಬರುವಂತಹ ಕೆರೆಗಳನ್ನು ಗುರುತಿಸಿ ಆಯಾ ಇಲಾಖೆ ಅವರು ಸರ್ವೇ ಕಾರ್ಯ ಕೈಗೊಂಡು ಸುಮಾರು 262 ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ. ಇನ್ನುಳಿದ ಕೆರೆಗಳ ತೆರವುಗೊಳಿಸುವ ಕಾರ್ಯವು ಪ್ರಗತಿಯಲ್ಲಿದೆ ಎಂದರು.

ಕೆರೆಗಳಲ್ಲಿ ನೀರು ಎಷ್ಟು ತುಂಬುತ್ತದೆ ಅಷ್ಟನ್ನು ಬಿಟ್ಟು ಉಳಿದ ಖಾಲಿ ಜಾಗದಲ್ಲಿ ಗಿಡ ನೆಡಲು ಅರಣ್ಯ ಇಲಾಖೆಗೂ ಕೂಡ ನಿರ್ದೇಶನ ನೀಡಲಾಗಿದೆ. ಕೆರೆಗಳ ಸುತ್ತ ಮತ್ತೆ ಒತ್ತುವರಿಯಾಗದಂತೆ ಎಚ್ಚರಿಕೆ ವಹಿಸಲು ಬಯೋ ಫೆನ್ಸಿಂಗ್ ಮಾಡಬೇಕು. ರೈತರು ತಮ್ಮ ಕೃಷಿ ಕೆಲಸಕ್ಕಾಗಿ ಕೆರೆಗಳ ಹೂಳೆತ್ತುವ ಕೆಲಸ ಮಾಡುತ್ತಿದ್ದರೆ, ಅವರಿಗೆ ಅವಕಾಶ ಮಾಡಿಕೊಡಿ. ಆದರೆ 3 ಅಡಿಗಿಂತ ಹೆಚ್ಚು ಆಳ ತೆಗೆಯಬಾರದು ಹಾಗೂ ಯಾವುದೇ ರೀತಿ ಆರ್ಥಿಕ ವ್ಯವಹಾರದ ಕೆಲಸಗಳಿಗೆ ಬಳಸುವುದಕ್ಕೆ ಅವಕಾಶವಿಲ್ಲ. ರೈತರು ಜಮೀನಿಗೆ ಮಣ್ಣು ತುಂಬಿಸುವುದಕ್ಕೆ, ಹಾಗೂ ನೀರು ಹಾಯಿಸುವ ಉದ್ದೇಶವಿದ್ದರೆ ಮಾತ್ರ ಅನುಮತಿ ಕೊಡಿ ಎಂದು ಸೂಚಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ ಮಾತನಾಡಿ, ವರ್ಷಗಳು ಉರುಳಿದಂತೆ ಬಿಸಿಲಿನ ತಾಪಮಾನವು ಕೂಡ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಮರಗಿಡಗಳನ್ನು ಕಡಿಯುತ್ತಿರುವುದು ಹಾಗೂ ಇರುವ ಕೆರೆಗಳನ್ನು ಒತ್ತುವರಿ ಮಾಡಿ ಕೆರೆ ಇಲ್ಲದಂತೆ ಮಾಡುತ್ತಿರುವುದು. ಪರಿಣಾಮ ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದು, ಬೇಸಿಗೆ ಸಮಯದಲ್ಲಿ ಜನರಿಗೆ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ತುಂಬ ಆಗುತ್ತಿದೆ. ಇದೆಲ್ಲದಕ್ಕೂ ಪರಿಹಾರ ಎಂದರೆ ಮರ ಗಿಡಗಳನ್ನು ಬೆಳೆಸಬೇಕು. ಕೆರೆಗಳ ಹೂಳೆತ್ತಿಸಿ ನೀರು ಸಂಗ್ರಹಿಸಬೇಕು. ಇಂದಿನ ಪೀಳಿಗೆಗೆ ಮಾತ್ರವಲ್ಲದೆ ಮುಂದಿನ ಪೀಳಿಗೆಗೂ ಸಹ ಅನುಕೂಲವಾಗುವಂತೆ ಮಾಡಿ ಕೆರೆಗಳ ರಕ್ಷಣೆ ಮಾಡಿ ಎಂದು ಹೇಳಿದರು.

ಸಭೆಯಲ್ಲಿ ಭೂ ದಾಖಲೆಗಳ ಶಾಖೆಯ ಉಪನಿರ್ದೇಶಕ ಉಮೇಶ್, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net