ಸಾಂಸ್ಕೃತಿಕ ನಗರಿಯಲ್ಲಿ ಕೆರೆಗಳು ಮಲಿನ

mysore
Published on

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಬಹುತೇಕ ಕೆರೆಗಳು ಜಲಚರಗಳಿಗೆ ಆಶ್ರಯ ತಾಣವಾಗುವ ಬದಲು ಮಲಿನ ನೀರಿನ ತೊಟ್ಟಿಗಳಾಗಿವೆ. ಇದುವೇ ಕೆರೆಗಳ ಅವಸಾನಕ್ಕೂ ಕಾರಣವಾಗುತ್ತಿದೆ.


ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಇತರ ರಾಜರು ಶತಮಾನಗಳ ಹಿಂದೆಯೇ ಮೈಸೂರು ನಗರವನ್ನು ಯೋಜನಾಬದ್ಧವಾಗಿ ರೂಪಿಸಿದ್ದರು. ಆದರೆ ಇದನ್ನು ಮುಂದುವರಿಸಿಕೊಂಡು ಹೋಗುವ ಬದಲು ನಗರ ಯೋಜನೆಯನ್ನೇ ಹಾಳು ಮಾಡಲಾಗುತ್ತಿದೆ.

ನಗರ ಹೊರವಲಯದಲ್ಲಿ ಬಡಾವಣೆಗಳು ಅವೈಜ್ಞಾನಿಕ, ಯೋಜನಾರಹಿತವಾಗಿ ನಿರ್ಮಿಸಲಾಗುತ್ತಿದೆ. ಒಳಚರಂಡಿ ಸೇರಿದಂತೆ ಮೂಲಸೌಕರ್ಯ ಕಲ್ಪಿಸುತ್ತಿಲ್ಲ. ಇದರ ಫಲವಾಗಿ ಕೆರೆಗಳು ತ್ಯಾಜ್ಯ, ಪ್ಲಾಸ್ಟಿಕ್, ಒಳಚರಂಡಿ ನೀರು ಸೇರಿಕೊಳ್ಳುತ್ತಿದೆ.


ಮುಡಾ ಎಗ್ಗಿಲ್ಲದೆ ಖಾಸಗಿ ಬಡಾವಣೆಗಳ ನಿರ್ಮಾಣಕ್ಕೆ ಅನುಮತಿ ನೀಡಿದೆ. ತಾನೂ ಸಹ ಬಡಾವಣೆ ನಿರ್ಮಿಸಿದೆ. ಆದರೆ ಒಳಚರಂಡಿ ವ್ಯವಸ್ಥೆಗೆ ನೀಲಿನಕ್ಷೆ ರೂಪಿಸದೆ ಕೈತೊಳೆದುಕೊಂಡಿದೆ. ಇದರಿಂದ ಕೆರೆಗಳು ಒಳಚರಂಡಿ ನೀರು ನಿಲ್ಲುವ ಸ್ಥಳವಾಗಿವೆ. ಇದು ಜಲಚರಗಳಿಗೆ ಕುತ್ತು ತಂದಿದ್ದರೆ, ಅನೈರ್ಮಲ್ಯ, ಪರಿಸರ ಹಾಳು ಮಾಡುವುದರೊಂದಿಗೆ ಜಲಮೂಲವನ್ನೂ ಕಲುಷಿತಗೊಳಿಸಿದೆ.


ತಿಪ್ಪಯ್ಯನ ಕೆರೆ, ವರುಣ ಕೆರೆ, ದಳವಾಯಿ ಕೆರೆ, ಕುಕ್ಕರಹಳ್ಳಿ ಕೆರೆ, ಬೋಗಾದಿ ಕೆರೆ, ಲಿಂಗಾಂಬುಧಿ ಕೆರೆ, ಕೇರ್ಗಳ್ಳಿ ಕೆರೆ, ದಟ್ಟಗಳ್ಳಿಯ ಅಯ್ಯಜ್ಜನಹುಂಡಿ ಕೆರೆ ಸೇರಿದಂತೆ ನಗರದಲ್ಲಿ ಬಹುತೇಕ ಕೆರೆಗಳು ಮಲಿನ ನೀರಿನ ಸಂಗ್ರಹ ಕೇಂದ್ರಗಳಾಗಿವೆ. ಉತ್ತಮ ನಿರ್ವಹಣೆಯಿಂದ ಕಾರಂಜಿ ಕೆರೆ ಕೊಂಚ ಉತ್ತಮ ಸ್ಥಿತಿಯಲ್ಲಿದೆ. ಉಳಿದ ಕೆರೆಗಳ ಸ್ಥಿತಿ ಅಯೋಮಯವಾಗಿದೆ.


ಸಾರ್ವಜನಿಕರ ಆಸ್ತಿಯಾಗಿರುವ ಈ ಕೆರೆಗಳನ್ನು ಸಂರಕ್ಷಣೆ ಮಾಡಬೇಕು. ಒಳಚರಂಡಿ ನೀರು ಸೇರ್ಪಡೆಯನ್ನು ತಡೆದು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕಿದೆ. ಜಲಚರಗಳು, ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿನ ತಾಣವಾಗಿ ರೂಪಿಸಬೇಕಿದೆ. ಇದರಿಂದ ಉತ್ತಮ ವಾತಾವರಣ, ಅಂತರ್ಜಲವೃದ್ಧಿ, ಹಸಿರು ಇನ್ನಿತರ ನೈಸರ್ಗಿಕಸಿರಿ ಮೊಳಕೆಯೊಡೆಯಲಿದೆ. ಈ ಕುರಿತು ಜನರಿಂದ ಸಂಗ್ರಹಿಸಿರುವ ಅಭಿಪ್ರಾಯ ಇಲ್ಲಿದೆ.

ಸರ್ಕಾರಕ್ಕೆ ಪ್ರಸ್ತಾವನೆ

ನಗರ ಹೊರವಲಯದಲ್ಲಿರುವ ತಿಪ್ಪಯ್ಯನಕೆರೆ, ವರುಣ ಕೆರೆ ಸೇರಿದಂತೆ ವಿವಿಧ ಕೆರೆಗಳಿಗೆ ಒಳಚರಂಡಿ ನೀರು ಸೇರುತ್ತಿದ್ದು, ಇದನ್ನು ತಡೆಯಲು ಯೋಜನೆ ರೂಪಿಸಲಾಗಿದೆ. ಅದಕ್ಕಾಗಿ ಕ್ರಿಯಾಯೋಜನೆ ತಯಾರಿಸಲಾಗಿದೆ. ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಅನುಮೋದನೆ ಪಡೆದು ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.ಕೆ.ಮರೀಗೌಡಅಧ್ಯಕ್ಷ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ

ಮೂಲಸ್ವರೂಪವೇ ಬದಲುನಗರದ ಬಹುತೇಕ ಕೆರೆಗಳು ಒಳಚರಂಡಿ ನೀರು, ಪ್ಲಾಸ್ಟಿಕ್‌ಮಯವಾಗಿವೆ. ಅವುಗಳ ಮೂಲಸ್ವರೂಪವೇ ಬದಲಾಗಿದೆ. ಪಾಚಿಯಿಂದ ದುರ್ವಾಸನೆ ಬೀರುತ್ತಿದೆ. ಇದನ್ನು ತಡೆಯದಿದ್ದರೆ ರೋಗರುಜಿನ ಬರುತ್ತವೆ ಎಂದು ಹೇಳಿ ಕೆರೆಯನ್ನೇ ಮುಚ್ಚಿಬಿಡುತ್ತಾರೆ. ಈ ಹಿಂದೆ ಕುಕ್ಕರಹಳ್ಳಿ ಕೆರೆ ಮುಚ್ಚಲು ಹೋಗಿದ್ದರು. ಹೋರಾಟ ಮಾಡಿ ತಡೆಯಲಾಯಿತು. ಇದೇ ರೀತಿ ಹೋರಾಟ ಮಾಡಿ ಉಳಿದ ಕೆರೆಗಳನ್ನೂ ಉಳಿಸಿಕೊಳ್ಳಬೇಕಿದೆ.ಡಾ.ಕೆ.ಎಂ.ಜಯರಾಮಯ್ಯ (ಕೆರೆ ಜಯರಾಮಯ್ಯ)ಮಾಜಿ ಸದಸ್ಯ, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ

ಸಂರಕ್ಷಿಸಿದರೆ ಜೀವ ಕಳೆ

ಕೆರೆಗಳ ಸಂರಕ್ಷಣೆ, ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ. ಆದ್ದರಿಂದ ಕೆರೆಗಳಲ್ಲಿ ವಿವಿಧ ಸಮಸ್ಯೆ ಸೃಷ್ಟಿಯಾಗುತ್ತಿವೆ. ಅದಕ್ಕಾಗಿ ಒಳಚರಂಡಿ ನೀರು, ಪ್ಲಾಸ್ಟಿಕ್, ಕಸ ಸೇರುವುದನ್ನು ತಡೆಯಬೇಕು. ಪರಿಸರಸ್ನೇಹಿಯಾಗಿ ಕೆರೆ ಅಭಿವೃದ್ಧಿಪಡಿಸಬೇಕು. ಅಲ್ಲಿರುವ ಜಲಚರಗಳು, ಪಕ್ಷಿಗಳ ಸಂರಕ್ಷಣೆ ಕ್ರಮ ವಹಿಸಿದಾಗಲೇ ಇವುಗಳಿಗೆ ಜೀವ ಕಳೆ ಬರಲು ಸಾಧ್ಯ.ಎಚ್.ಕೆ.ದೇವರಾಜುನಗರ ನಿವಾಸಿ

ಜಾನುವಾರುಗಳಿಗೆ ನೀರಿಲ್ಲ

ಮೈಸೂರು ನಗರ ಸೇರಿದಂತೆ ಜಿಲ್ಲೆಯ ಪ್ರತಿ ಊರಿನಲ್ಲಿರುವ ಕೆರೆಗಳಿಗೆ ಕೊಳಚೆನೀರು ಸೇರುತ್ತಿದೆ. ಜಾನುವಾರಗಳಿಗೆ ನೀರಿನ ಮೂಲವಿಲ್ಲದಂತೆ ಮಾಡಲಾಗುತ್ತಿದೆ. ಇವುಗಳ ಬದುಕಿಗೆ ಅನನುಕೂಲ ಉಂಟು ಮಾಡಲಾಗಿದೆ. ಈ ವಿಷಯದಲ್ಲಿ ಪಾಲಿಕೆ, ಮುಡಾ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳು ನಿರ್ಲಕ್ಷೃ ವಹಿಸಿವೆ. ಇವುಗಳು ಕಂಡರೂ ಕಾಣದಂತೆ ವರ್ತಿಸುತ್ತಿವೆ. ಈ ಅಸಡ್ಡೆಗೆ ಭವಿಷ್ಯದಲ್ಲಿ ನಾವುಗಳೆಲ್ಲ ದೊಡ್ಡ ಬೆಲೆ ತೆರಬೇಕಾಗುತ್ತದೆ. ಆದ್ದರಿಂದ ಕೆರೆಗಳ ಸಂರಕ್ಷಣೆಗಾಗಿ ರೈತ ಸಂಘ ಹೋರಾಟ ಮಾಡಿಕೊಂಡು ಬರುತ್ತಿದೆ.ಪಿ.ಮರಂಕಯ್ಯಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಮುಖಂಡ

ಸಂಘಟನೆಗಳು ಧ್ವನಿಗೂಡಿಸಲಿ

ಕೆರೆಗಳ ಸಂರಕ್ಷಣೆಗೆ ಸಾರ್ವಜನಿಕರಿಂದ ದೊಡ್ಡ ಧ್ವನಿ ಬರಬೇಕು. ಅದಕ್ಕೆ ವಿವಿಧ ಸಂಘಟನೆಗಳು ಧ್ವನಿಗೂಡಿಸಬೇಕು. ಆಗಲೇ ಈ ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡಲು ಸಾಧ್ಯ. ನಗರ ಬಹುತೇಕ ಕೆರೆಗಳು ಕಲುಷಿತಗೊಳ್ಳುವ ಮೂಲಕ ನಾಗರಿಕ ವ್ಯವಸ್ಥೆಯನ್ನೇ ಹಾಳು ಮಾಡಲಾಗಿದೆ. ಬಡಾವಣೆ ನಿರ್ಮಿಸಲಾಗಿದೆ. ಆದರೆ ಮೂಲಸೌಕರ್ಯ ಕಲ್ಪಿಸಿಲ್ಲ. ಇದುವೇ ಮುಡಾದ ಮತ್ತೊಂದು ಹಗರಣ ಎಂದೇ ಹೇಳಬಹುದು. ಒಂದು ಬಡಾವಣೆಯಿಂದ ಇನ್ನೊಂದು ಬಡಾವಣೆಗೆ ಒಳಚರಂಡಿ ನೀರು ಹರಿದು ಹೋಗಲು ಯುಜಿಡಿ ವ್ಯವಸ್ಥೆ ಜೋಡಣೆಯಾಗಬೇಕು. ಅಲ್ಲಲ್ಲಿ ಕಲುಷಿತ ನೀರು ಸಂಸ್ಕರಣಾ ಘಟಕ ನಿರ್ಮಿಸಬೇಕು. ಇದರೊಂದಿಗೆ ಕೆರೆಗಳ ಉಳಿಸಲು ವೈಜ್ಞಾನಿಕ ಕ್ರಮ ವಹಿಸಬೇಕು.ಯು.ಎನ್.ರವಿಕುಮಾರ್ಜಲತಜ್ಞ

ನಿರ್ವಹಣೆ ಮಾಡಬೇಕು

ಕೆರೆಯ ನೀರು ಬಳಕೆಯಾಗುತ್ತಿದ್ದರೆ ಸಮಸ್ಯೆ ಆಗಲ್ಲ. ಈ ಕೆರೆಗಳ ನೀರನ್ನು ಮೊದಲು ಕೃಷಿಗೆ ಉಪಯೋಗವಾಗುತ್ತಿದ್ದವು. ಈಗ ಚರಂಡಿ ನೀರು ಸೇರುವ ಪ್ರಮಾಣ ಹೆಚ್ಚಾಗಿ ಕೆರೆಗೆ ಮಳೆ ನೀರಿನ ಹರಿವು ತಗ್ಗಿದೆ. ಇದು ಹೀಗೆ ಮುಂದುವರಿದರೆ ಕೆರೆಗಳು ಮಾಲಿನ್ಯ ತಾಣಗಳಾಗಲಿವೆ. ನಗರದ ಎಲ್ಲ ಕೆರೆಗಳ ನಿರ್ವಹಣೆ ಮಾಡಬೇಕು. ಅದು ಸಾಧ್ಯವಾಗದಿದ್ದರೆ ಒಳಚರಂಡಿ ನೀರು ಸೇರುವುದನ್ನು ತಡೆದು ಕೆರೆಗಳನ್ನು ಉಳಿಸಬೇಕು.ಆರ್.ಕೆ.ನಿಖಿತ್ ರಾಮ್ಇಂಜಿನಿಯರಿಂಗ್ ವಿದ್ಯಾರ್ಥಿ, ಮೈವಿವಿ

ಪ್ರಾಮಾಣಿಕ ಪ್ರಯತ್ನ ಅಗತ್ಯ

ಲಿಂಗಾಂಬುಧಿ ಕೆರೆಗೆ ರಾಮಕೃಷ್ಣನಗರ, ವಿವೇಕಾನಂದ ನಗರದಿಂದ ಬರುತ್ತಿರುವ ಒಳಚರಂಡಿ ನೀರು, ಪ್ಲಾಸ್ಟಿಕ್ ವಸ್ತುಗಳನ್ನು ತಡೆಯಲು ಸಾಧ್ಯವಾಗಿಲ್ಲ. ಪುನರುಜ್ಜೀವನಗೊಂಡಿರುವ ಕೇರ್ಗಳ್ಳಿ ಕೆರೆ, ದಟ್ಟಗಳ್ಳಿ ಸಮೀಪದ ಅಯ್ಯಜ್ಜನಹುಂಡಿ ಕೆರೆಗಳಿಗೂ ಒಳಚರಂಡಿ ನೀರು ಕಂಟಕವಾಗಿದೆ. ಕಟ್ಟಡ ತ್ಯಾಜ್ಯವನ್ನೂ ಹಾಕಲಾಗುತ್ತಿದೆ. ಇದನ್ನು ತಡೆಯಲು ಸ್ಥಳೀಯ ಸಂಸ್ಥೆಗಳು, ಅಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು.ಆರ್.ರಶ್ಮಿನಗರ ನಿವಾಸಿ

ಬಳಕೆಗೆ ಯೋಗ್ಯವಲ್ಲ

ಮಳೆ ನೀರಿನ ಬದಲು ಕೆರೆಗಳಿಗೆ ಒಳಚರಂಡಿ ನೀರು, ಮನೆಗಳ ದಿನ ಬಳಕೆ ನೀರು ಸೇರುತ್ತಿದೆ. ಇದರಲ್ಲಿ ರಾಸಾಯನಿಕ ದ್ರಾವಣ, ಸೋಡಿಯಂ ಡೋಡೆಸಿಲ್ ಸಲ್ಫೇಟ್ ರಾಸಾಯನಿಕ, ರಂಜಕ ಸೇರಿದಂತೆ ಇನ್ನಿತರ ರಾಸಾಯಿನಿಕ ವಸ್ತುಗಳು ಕೆರೆಯನ್ನು ಹಾಳು ಮಾಡುತ್ತಿವೆ. ಇವುಗಳು ಅಲ್ಲಿಯ ಜಲಚರಗಳ ಜೀವಕ್ಕೆ ಕುತ್ತು ತರುತ್ತಿವೆ. ಜತೆಗೆ ಇವುಗಳ ನೀರು ಬಳಕೆಗೆ ಯೋಗ್ಯವಾಗಿಲ್ಲ.ಸಾಗರ ಸುರೇಶ್ಉದ್ಯೋಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net