

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ಸಣ್ಣ ನೀರಾವರಿ ಮತ್ತು ಅಂರ್ತಜಲ ಅಭಿವೃದ್ಧಿ ಇಲಾಖೆ ತನ್ನ ವ್ಯಾಪ್ತಿಯಲ್ಲಿರುವ ರಾಜ್ಯದ ಕೆರೆಗಳ ಪೈಕಿ ನೂರಾರು ಕೆರೆಗಳನ್ನು ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿ ಪಡಿಸಲು ಮುಂದಾಗಿದೆ. ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಜೂನ್ 6 ರಂದು ನೀಡಿರುವ ನಿರ್ದೇಶನದಂತೆ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಇಲಾಖೆ ಕೆರೆಗಳ ಪೈಕಿ ಆಯ್ದವುಗಳನ್ನು ಸಾರ್ವಜನಿಕ -ಖಾಸಗಿ ಸಹಭಾಗಿತ್ವ (ಪಿಪಿಪಿ)ಮಾದರಿಯೊಂದಿಗೆ ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ.
ಇದಕ್ಕಾಗಿ ಆಯಾ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳು, ನಗರ, ಪಟ್ಟಣ ಅಥವಾ ಹೋಬಳಿ ಕೇಂದ್ರ ಹಾಗೂ ದೇವಾಲಯ ಮತ್ತಿತರ ಧಾರ್ಮಿಕ ಕೇಂದ್ರಗಳಿಗೆ ಹೊಂದಿಕೊಂಡಿರುವ, ನೀರಿನ ಲಭ್ಯತೆ, ಸರ್ವಋತು ಅಥವಾ ಹಬ್ಬ, ಹರಿದಿನ ಬೇಡಿಕೆ ಇತ್ಯಾದಿಗಳೊಂದಿಗೆ ಪ್ರವಾಸಿ ತಾಣಕ್ಕೆ ಅತ್ಯುತ್ತಮ ಹಾಗೂ ಪರವಾಗಿಲ್ಲ ಎಂದು ವಿಂಗಡಿಸಿ, ಕೆರೆಗಳನ್ನು ಅಭಿವೃದ್ಧಿಗೆ ಗುರುತಿಸಲಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ಮಾನದಂಡಗಳಿರುವ ಕೆರೆಗಳ ಪಟ್ಟಿ ಪ್ರತಿ ಜಿಲ್ಲೆಯಿಂದ ರಾಜ್ಯ ಸರ್ಕಾರಕ್ಕೆ ರವಾನಿಸಲಾಗಿದೆ.
ಈ ಕೆರೆಗಳ ಅಭಿವೃದ್ಧಿಗೆ ರಾಜ್ಯಮಟ್ಟದಲ್ಲೇ ಟೆಂಡರ್ ಆಗಬೇಕಿದ್ದು, ಅಭಿವೃದ್ಧಿಗೆ ಮುಂದೆ ಬರುವ ಖಾಸಗಿ ಕಂಪನಿ ಐಲ್ಯಾಂಡ್, ವಾಕಿಂಗ್ ಪಾಥ್, ಬೋಟಿಂಗ್, ರೆಸ್ಟೋರೆಂಟ್ ಇತ್ಯಾದಿ ಅಗತ್ಯ ಮೂಲ ಸೌಕರ್ಯಗಳೊಂದಿಗೆ ಕೆರೆಗಳನ್ನು ಅತ್ಯುತ್ತಮ ಪ್ರವಾಸಿ ತಾಣವನ್ನಾಗಿ ಪರಿವರ್ತಿಸಬೇಕಿದೆ. ರಾಜ್ಯದಲ್ಲಿ 41,849 ಭಾರಿ, ಸಣ್ಣ ನೀರಾವರಿ ಹಾಗೂ ಜಿಪಂ ಕೆರೆಗಳಿವೆ. ಇವುಗಳ ಪೈಕಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಆಯ್ದ ಕೆರೆಗಳನ್ನು ಉದ್ದೇಶಿತ ಅಭಿವೃದ್ಧಿಗೆ ಗುರುತಿಸಲಾಗಿದೆ.
17 ಕೆರೆಗಳ ಅಭಿವೃದ್ಧಿ:
ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿ ಚಿತ್ರದುರ್ಗ ಜಿಲ್ಲೆಯಲ್ಲಿ 166 ಹಾಗೂ ದಾವಣಗೆರೆ ಜಿಲ್ಲೆಯಲ್ಲಿ 72 ಕೆರೆಗಳಿವೆ. ಇವುಗಳಲ್ಲಿ ಚಿತ್ರದುರ್ಗದಲ್ಲಿ 15 ಹಾಗೂ ದಾವಣಗೆರೆ ಜಿಲ್ಲೆಯಲ್ಲಿ 2 ಕೆರೆಗಳನ್ನು ಅಭಿವೃದ್ಧಿಗೆ ಗುರುತಿಸಲಾಗಿದೆ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಸಿದ್ದಾಪುರ, ರಂಗಯ್ಯದುರ್ಗ, ಚಿತ್ರದುರ್ಗದ ಮಲ್ಲಾಪುರ, ಗೋನೂರು, ಭರಮಸಾಗರದ ದೊಡ್ಡಕೆರೆ, ಹಿರಿಯೂರಿನ ಉಡುವಣಿ, ಧರ್ಮಪುರ, ಚಳ್ಳಕೆರೆ ಗೊರ‌್ಲಗುಂಟೆ ದುಗ್ಗಮ್ಮನ ಕೆರೆ, ನಾಯಕನಹಟ್ಟಿ ಚಿಕ್ಕಕೆರೆ, ಪರಶುರಾಂಪುರ ಹೊಸ ಕೆರೆ, ರಾಣಿಕೆರೆ, ಹೊಳಲ್ಕೆರೆಯ ಹಿರೇಕೆರೆ, ಹೊಸದುರ್ಗದ ಶಂಕರ ದೇವರಕೆರೆ, ದಾವಣಗೆರೆ ಜಿಲ್ಲೆಯ ಸವಳಂಗ ಹಾಗೂ ಜಗಳೂರಿನ ಸಂಗೇನಹಳ್ಳಿ ಕೆರೆಗಳು ಪಟ್ಟಿಯಲ್ಲಿವೆ.
ಚಿತ್ರದುರ್ಗ ನಗರದ ಮಲ್ಲಾಪುರ ಕೆರೆಗೆ ಪ್ರಸ್ತುತ ಹರಿದು ಬರುತ್ತಿರುವ ಕೊಳಚೆ ನೀರನ್ನು ಸಂಪೂರ್ಣ ಸ್ಥಗಿತಗೊಳಿಸಬೇಕಿದೆ. ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಕಳೆದ ಜನವರಿಯಲ್ಲಿ ಜಿಲ್ಲಾ ಪ್ರವಾಸ ಸಂದರ್ಭದಲ್ಲಿ ಮಲ್ಲಾಪುರ ಕೆರೆ ದುಸ್ಥಿತಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಆ ಬಳಿಕ ಸಣ್ಣ ನೀರಾವರಿ ಇಲಾಖೆ ಒಂದಿಷ್ಟು ಹದ್ದುಬಸ್ತು ಕಾರ‌್ಯ ಪೂರ್ಣಗೊಳಿಸಿದ್ದರೂ ನಗರಸಭೆ ಮತ್ತು ನಗರ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಈ ನಿಟ್ಟಿನಲ್ಲಿ ತೀವ್ರ ಗಮನ ಹರಿಸಬೇಕಿದೆ.
ಕೋಟ್..
ಇಲಾಖೆ ಆಯ್ದ ಕೆರೆಗಳನ್ನು ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಕಾಮಗಾರಿ ನಿರ್ವಹಿಸುವಂಥ ಕಂಪನಿಗೆ ಇಲಾಖೆ ತಾಂತ್ರಿಕ ನೆರವು ಒದಗಿಸಲಿದೆ. ಸರ್ಕಾರದಿಂದ ಸೂಕ್ತ ನಿದೇಶನ ಮತ್ತು ಮಾರ್ಗಸೂಚಿ ಬರಬೇಕಿದೆ. ಒತ್ತುವರಿ ಮತ್ತಿತರ ಸಮಸ್ಯೆಗಳಿದ್ದರೆ ಸರಿಪಡಿಸಲಾಗುವುದು.
ಎಚ್.ಜೆ.ಅಣ್ಣಪ್ಪ, ಎಇಇ, ಸಣ್ಣ ನೀರಾವರಿ ಇಲಾಖೆ ಚಿತ್ರದುರ್ಗ ಸಬ್‌ಡಿವಿಜನ್.
---