

ಚಿತ್ರದುರ್ಗ: ಕೆರೆಗಳ ನಿರ್ವಹಣೆ ಮತ್ತು ಸಂರಕ್ಷಣೆ ಹೊಣೆಯನ್ನು ಕೆರೆ ಬಳಕೆದಾರರ ಸಂಘಗಳಿಗೆ ವಹಿಸುವಂತೆ ಜಿಲ್ಲಾ ಕೆರೆ ಬಳಕೆದಾರರ ಸಂಘಗಳ ಒಕ್ಕೂಟ ಜಿಲ್ಲಾಧಿಕಾರಿಗೆ ದಿವ್ಯಾಪ್ರಭು ಅವರಿಗೆ ಮನವಿ ಮಾಡಿದೆ.
ಡಿಸಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಒಕ್ಕೂಟದ ಪ್ರಮುಖರು ಕೆರೆಗಳ ಸಂರಕ್ಷಣೆಯ ಜವಾಬ್ದಾರಿಯನ್ನು ಕೆರೆ ಬಳಕೆದಾರರ ಸಂಘ ಗಳಿಗೆ ವಹಿಸುವಂತೆ ಒಕ್ಕೂಟದ ಪ್ರಮುಖರು ಕೋರಿದರು.
ಜಿಲ್ಲೆ ರೈತರು ಕೃಷಿ, ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಕೆರೆಗಳನ್ನು ಆಶ್ರಯಿಸುವಂತಾಗಿದೆ. ಜಿಲ್ಲೆಯಲ್ಲಿರುವ 305 ಕೆರೆಗಳಲ್ಲಿ 153 ಕೆರೆಗಳನ್ನು ಈ ಯೋಜನೆ ವ್ಯಾಪ್ತಿಗೆ ಸೇರಿಸಿ 153 ಕೆರೆ ಬಳಕೆದಾರರ ಸಂಘಗಳೊಂದಿಗೆ ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ. ಚಿತ್ರದುರ್ಗ ತಾಲೂಕಿನಲ್ಲಿ 44, ಹಿರಿಯೂರು-54,ಮೊಳಕಾಲ್ಮೂರು 22,ಹೊಸದುರ್ಗ-52,ಹೊಳಲ್ಕೆರೆ 55, ಚಳ್ಳಕೆರೆ ತಾಲ್ಲೂಕಿನಲ್ಲಿ 78 ಕೆರೆಗಳಿವೆ. ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಜಿಲ್ಲೆಯಲ್ಲಿ 59 ಸಂಘಗಳನ್ನು ರಚಿಸಲಾಗಿದೆ ಎಂದು ಪ್ರಮುಖರು ತಿಳಿಸಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಬಿ.ನಾಗರಾಜಯ್ಯ ಮಾತನಾಡಿ,ಬಹುತೇಕ ಕೆರೆಗಳು ಭರ್ತಿಯಾಗಿವೆ. ಇವುಗಳ ನಿರಂತರ ನಿರ್ವಹಣೆಗೆ ತ್ರಿಪಕ್ಷಿಯ ಒಪ್ಪಂದದಂತೆ ಸಂಘಗಳಿಗೆ ವಹಿಸಬೇಕು. ಒತ್ತುವರಿ ತೆರವುಗೊಳಿಸ ಬೇಕು. ಕೆರೆ ಅಂಗಳದಲ್ಲಿ ಅವೈಜ್ಞಾನಿಕವಾಗಿ ಮರಳು,ಮಣ್ಣು ಎತ್ತುವುದನ್ನು ನಿಲ್ಲಿಸಬೇಕು.
ಕೆರೆ ಅಂಚಿನಲ್ಲಿ ಅರಣ್ಯೀಕರಣವಾಗಬೇಕು.ಮೀನು ಹರಾಜು ಹಕ್ಕನ್ನು ಸಂಘಗಳಿಗೆ ವಹಿಸಬೇಕು ಇತ್ಯಾದಿ ಬೇಡಿಕೆಗಳನ್ನು ಸಭೆಯಲ್ಲಿ ಮಂಡಿಸ ಲಾಯಿತು. ಬೇಡಿಕೆ ಕುರಿತಂತೆ ಚರ್ಚಿಸಿದ ಡಿಸಿ,ಸೂಕ್ತ ಕ್ರಮದ ಭರವಸೆ ನೀಡಿದರು. ಒಂದು ತಿಂಗಳಲ್ಲಿ ಜಿಲ್ಲೆಯ ಕೆರೆಗಳ ಸ್ಥಿತಿಗತಿ ಕುರಿತು ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಒಕ್ಕೂಟದ ಜಿಲ್ಲಾ ಕಾರ‌್ಯದರ್ಶಿ ಬಿ.ಆನಂದ್,ಜಿಲ್ಲಾ ಉಪಾಧ್ಯಕ್ಷ ಐಯ್ಯಣ್ಣ,ಖಜಾಂಚಿ ಬೋಜಣ್ಣ ಕೂನಿಕೆರೆ,ಸಿದ್ದೇಶ್,ನಾಗರಾಜ್‌ಸಿರಿಗೆರೆ, ಮಲ್ಲೇ ಶಪ್ಪ,ಬೋರಯ್ಯ,ನಾಗರಾಜ್,ರಮೇಶ್,ಕೃಷ್ಣಪ್ಪ,ಚಂದ್ರಶೇಖರಯ್ಯ,ನೀರಗುಂದ ಚಂದ್ರಣ್ಣ, ಹೊಳಲ್ಕೆರೆಯ ಜಗದೀಶ್ ನಾಡಿಗ್, ಬುಕ್ಕಾಂ ಬುದಿ ನಾಗರಾಜ್,ಗೋಸಿಕೆರೆ ನಾಗೇಂದ್ರಪ್ಪ,ಪ್ರಾಧಿಕಾರದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್.ದೇಶ್‌ಮುಖ್,ಪಿಆರ್‌ಐಡಿ ಇಇ ಹನು ಮಂತಪ್ಪ,ಎಇಗಳಾದ ಅಣ್ಣಪ್ಪ, ಪಾಂಡುರಂಗಪ್ಪ ಹಾಗೂ ಸಣ್ಣನೀರಾವರಿ ಇಲಾಖೆ ಇಂಜಿನಿಯರ್‌ಗಳು ಇದ್ದರು.
-----