

ಸಂತೋಷ ಮುರಡಿ ಮುಂಡರಗಿ
ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ತಾಲೂಕಿನ ನೀರಾವರಿ ಕೆರೆಗಳ ಕಾಲುವೆಗಳು ಬಹುತೇಕ ಕಡೆ ಹಲವಾರು ವರ್ಷಗಳಿಂದ ದುರಸ್ತಿ ಸ್ಥಿತಿಯಲ್ಲಿವೆ. ಹೀಗಾಗಿ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪದಂತಾಗಿದ್ದು ಪ್ರತಿವರ್ಷವೂ ತೊಂದರೆ ಅನುಭವಿಸುವಂತಾಗಿದೆ.
ತಾಲೂಕಿನ ತಾಮ್ರಗುಂಡಿ, ಡಂಬಳ, ಜಂತ್ಲಿಶಿರೂರ, ಪೇಠಾಲೂರ, ಶಿಂಗಟರಾಯನಕೇರಿ, ಶಿರೋಳ, ಮುಂಡವಾಡ, ಮುರುಡಿ, ಕೆಲೂರ, ಹಿರೇವಡ್ಡಟ್ಟಿ, ಚಿಕ್ಕವಡ್ಡಟ್ಟಿ ಸೇರಿದಂತೆ ಒಟ್ಟು 11 ಕೆರೆಗಳಿವೆ. ಈ ಕೆರೆಗಳು 776.76 ಹೆಕ್ಟೇರ್ ವಿಸ್ತಾರ ಹೊಂದಿವೆ. ಹನ್ನೊಂದು ಕೆರೆಗಳ ಪೈಕಿ ಡಂಬಳ, ಮುಂಡವಾಡ, ತಾಮ್ರಗುಂಡಿ, ಶಿರೋಳ, ಜಂತ್ಲಿಶಿರೂರ, ಪೇಠಾಲೂರ ನೀರಾವರಿ ಕೆರೆಗಳಾಗಿದ್ದು, ಸುಮಾರು 4,330.88 ಹೆಕ್ಟೇರ್ ಪ್ರದೇಶ ನೀರಾವರಿ ಮಾಡಬಹುದಾಗಿದೆ.
ಬಹುತೇಕ ಕಡೆಗಳಲ್ಲಿ ಕೆರೆಗಳ ಕಾಲುವೆಗಳು ದುರಸ್ತಿ ಸ್ಥಿತಿಯಲ್ಲಿದ್ದರೆ, ಕೆಲವೆಡೆ ಕಾಲುವೆಗಳಲ್ಲಿ ಹೂಳು ತುಂಬಿ ನೀರು ಸರಾಗವಾಗಿ ಮುಂದೆ ಸಾಗದಂತಾಗಿದೆ. ಕೆರೆಗಳಲ್ಲಿ ಜಾಲಿಕಂಟಿಗಳು ಬೆಳೆದು ಕೆರೆಯ ಅಂದವನ್ನೆ ಹಾಳು ಮಾಡಿವೆ. ಅನೇಕ ಕೆರೆಗಳ ಒಡ್ಡಿನ ಸುತ್ತ-ಮುತ್ತಲಿನಲ್ಲಿ ಜಾಲಿಗಿಡ ಬೆಳೆದಿದ್ದು ರೈತರಿಗೆ ತೊಂದರೆಯಾಗಿದೆ. ಬಹುತೇಕ ಕೆರೆಗಳಲ್ಲಿ ಹೂಳು ತುಂಬಿಕೊಂಡಿದ್ದರಿಂದ ಸಣ್ಣ ಮಳೆಗೆ ಕೆರೆಗಳು ಭರ್ತಿಯಾಗುತ್ತವೆ. ಬೇಸಿಗೆ ಆರಂಭಕ್ಕೂ ಮುನ್ನವೇ ಬರಿದಾಗುತ್ತವೆ.
ತಾಮ್ರಗುಂಡಿ ಕೆರೆ ಭಾಗದಲ್ಲಿರುವ ಕಾಲುವೆ ಅಲ್ಲಲ್ಲಿ ಕಿತ್ತು ಹೋಗಿದ್ದರಿಂದ ರೈತರಿಗೆ ಸಮರ್ಪಕವಾಗಿ ನೀರು ಹರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನೀರು ಹರಿಸುವಾಗ ಕಾಲುವೆಯ ಕಿತ್ತೋದ ಕಡೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ನೀರು ಹರಿದು ಹೋಗಿ ಬೇರೊಂದು ಜಮೀನಿಗೆ ನುಗ್ಗತ್ತದೆ. ಇದರಿಂದ ನೀರಿನ ಅವಶ್ಯಕತೆ ಇಲ್ಲದ ಬೆಳೆಯೂ ಹಾನಿಯಾಗಿ ರೈತರು ನಷ್ಟ ಅನುಭವಿಸಬೇಕಾಗುತ್ತದೆ.
ಡಂಬಳ ಕೆರೆಯ ಎರಿ ಭಾಗದಲ್ಲಿರುವ ಕಾಲುವೆಗಳು ಒಡೆದಿದ್ದರಿಂದ ಪ್ರಾರಂಭದಲ್ಲಿನ ರೈತರ ಜಮೀನಿಗೆ ಅಲ್ಪಮಟ್ಟಿಗೆ ನೀರು ತಲುಪಿದರೆ ಮುಂಭಾಗದಲ್ಲಿರುವ ಜಮೀನಿಗೆ ನೀರು ತಲುಪುವುದಿಲ್ಲ. ಕಾಲುವೆ ಒಡೆದ ಕಡೆಯಲ್ಲಿ ನೀರು ವೃಥಾ ಹರಿದುಹೋಗಿ ರಸ್ತೆ ಮೇಲೆ, ಜಮೀನಿನೊಳಗೆ ಸೇರುತ್ತದೆ. ಪೇಠಾಲೂರ ಕೆರೆ ಭಾಗದ ಕಾಲುವೆ ಬಳಿ ಸಿಮೆಂಟ್ ಪೈಪ್‌ಲೈನ್ ಹಾಳಾಗಿದ್ದು ನೀರು ವ್ಯರ್ಥವಾಗುತ್ತಿದೆ. ಆ ನೀರು ಕೆಲವೊಂದು ಜಮೀನಿಗೆ ನುಗ್ಗಿ ರೈತರು ಬೆಳೆನಷ್ಟ ಅನುಭವಿಸುತ್ತಾರೆ. ಬಹುತೇಕ ಕಡೆ ಉಪಕಾಲುವೆ ಗೇಟ್ ಕಿತ್ತು ಹೋಗಿದ್ದರಿಂದ ನೀರು ಹರಿಸಲು ಸಮಸ್ಯೆಯಾಗುತ್ತಿದೆ. ಮುಂಡವಾಡ ಕೆರೆಯಿಂದ ಬರುವ ಕಾಲುವೆಯಲ್ಲಿ ಹೆಚ್ಚಾಗಿ ಹೂಳು ತುಂಬಿದ್ದರಿಂದ ಸುಮಾರು ಒಂದೂವರೆ ಕಿ.ಮೀ. ಹರಿದು ಮುಂದೆ ಹರಿಯದೆ ಸ್ಥಗಿತಗೊಳ್ಳುತ್ತದೆ. ಕೆಲವೆಡೆ ಭಾರಿ ಪ್ರಮಾಣದ ನೀರು ವೃಥಾ ಹಳ್ಳಕ್ಕೆ ಸೇರುತ್ತದೆ.
ಒಟ್ಟಾರೆ ಬಹುತೇಕ ಕಡೆಗಳಲ್ಲಿ ನೀರಾವರಿ ಕೆರೆಗಳಿಂದ ಕಾಲುವೆಗೆ ಹರಿಸುವ ನೀರು ಸಮರ್ಪಕವಾಗಿ ತಲುಪದಂತಾಗಿದೆ. ಹರಿದು ಬರುವ ಅಲ್ಪಸ್ವಲ್ಪ ನೀರಿನ ಆಸರೆಯಲ್ಲಿ ಬೆಳೆಗೆ ನೀರು ಹರಿಸುವಂತಾಗಿದೆ. ಕಾಲುವೆ ದುರಸ್ತಿಗೊಂಡರೆ ಮಾತ್ರ ಜಮೀನುಗಳಿಗೆ ಸಮರ್ಪಕವಾಗಿ ನೀರು ದೊರೆಯಲಿದೆ.
ಕೆಲವು ವರ್ಷಗಳಿಂದ ಸಿಂಗಟಾಲೂರ ಏತ ನೀರಾವರಿ ಯೋಜನೆ ಮುಖ್ಯಕಾಲುವೆ ಮೂಲಕ ತುಂಗಭದ್ರಾ ನದಿ ನೀರನ್ನು ತಾಲೂಕಿನ ಶಿರೋಳ, ಡಂಬಳ, ತಾಮ್ರಗುಂಡಿ, ಮುಂಡವಾಡ, ಮತ್ತಿತರ ಕೆರೆಗಳನ್ನು ತುಂಬಿಸಲಾಗುತ್ತಿದೆ. ಸದ್ಯ ಕೆಲವು ಕೆರೆಗೆ ನೀರು ತುಂಬಿಸುವ ಕಾರ್ಯ ಆರಂಭಗೊಂಡಿದೆ. ಇದರಿಂದ ಆಯಾ ಭಾಗದ ರೈತರಿಗೆ ಕೆರೆ ಕಾಲುವೆ ನೀರಿನಿಂದ ಜಮೀನಿನಲ್ಲಿ ನೀರಾವರಿ ಮಾಡಲು ತುಂಬಾ ಅನುಕೂಲವಾಗುತ್ತಿದೆ. ಆದರೆ, ಅಲ್ಲಲ್ಲಿ ವೃಥಾ ಪೋಲಾಗುವುದನ್ನು ತಡೆದರೆ ಜಮೀನುಗಳಿಗೆ ಹಾಗೂ ಜನ-ಜಾನುವಾರುಗಳಿಗೆ ಪ್ರಯೋಜನವಾಗಲಿದೆ ಎನ್ನುತ್ತಾರೆ ಸ್ಥಳೀಯರು.
ಕೆರೆಗಳ ಕಾಲುವೆಗಳು ಬಹುತೇಕ ದುರಸ್ತಿ ಸ್ಥಿತಿಯಲ್ಲಿವೆ. ಹೀಗಾಗಿ ಕೆರೆಯ ನೀರು ಜಮೀನುಗಳಿಗೆ ಸರಿಯಾಗಿ ಹರಿಯದಂತಾಗಿದೆ. ಹಾಗೆಯೇ ಕೆರೆ ಮತ್ತು ಕಾಲುವೆಯಲ್ಲಿ ಹೂಳು ತುಂಬಿಕೊಂಡಿದ್ದು ಅಲ್ಲಲ್ಲಿ ಜಾಲಿಗಿಡ ಬೆಳೆದಿವೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ. ಇನ್ನಾದರೂ ಮುತುವರ್ಜಿ ವಹಿಸಿ ಕೆರೆ ಕಾಲುವೆಗಳನ್ನು ದುರಸ್ತಿಗೊಳಿಸುವ ಕೆಲಸ ಮಾಡಲು ಮುಂದಾಗಬೇಕು.ಅಮರೇಶ ಹಿರೇಮಠ ತಾಮ್ರಗುಂಡಿ, ಗ್ರಾ.ಪಂ.ಸದಸ್ಯ
ಕೆರೆ ಕಾಲುವೆಗಳ ದುರಸ್ತಿ ಒಳಗೊಂಡಂತೆ ಕೆರೆಗಳ ಅಭಿವೃದ್ಧಿಗಾಗಿ ವರದಿ ತಯಾರಿಸಿ ಈಗಾಗಲೆ ಸರ್ಕಾರಕ್ಕೆ ಅಂದಾಜು ಪತ್ರಿಕೆಯ ವರದಿ ಸಲ್ಲಿಸಲಾಗಿದೆ. ಅನುದಾನ ಬಂದ ತಕ್ಷಣವೇ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತದೆ. ಸದ್ಯಕ್ಕೆ ಕಾಲುವೆಯಲ್ಲಿ ನೀರು ಹರಿಯಲು ತಾತ್ಕಾಲಿಕವಾಗಿ ಅನುಕೂಲತೆ ಮಾಡಿಕೊಡಲಾಗುತ್ತಿದೆ. ಕೆರೆ ಸುತ್ತ-ಮುತ್ತಲಿರುವ ಜಾಲಿಗಿಡ ತೆರವುಗೊಳಿಸುವ ಕಾರ್ಯ ಮಾಡಲಾಗುವುದು.ಪ್ರವೀಣ ಪಾಟೀಲ, ಸಹಾಯಕ ಇಂಜಿನಿಯರ್ ಸಣ್ಣ ನೀರಾವರಿ ಇಲಾಖೆ ಗದಗ