ಟಿ.ಜಿ.ಹಳ್ಳಿ ನದಿಪಾತ್ರ ಒತ್ತುವರಿ? 4 ಕಾಮಗಾರಿಗಳಿಗೆ ಮಾತ್ರ ಟೆಂಡರ್

Kere 2 22 Feb 20
Published on

ತಿಪ್ಪಗೊಂಡನಹಳ್ಳಿ ಜಲಾಶಯದ ಪುನಃಶ್ಚೇತನದ ಮೊದಲ ಹಂತದ ನಾಲ್ಕು ಕಾಮಗಾರಿಗಳಿಗೆ ಮಾತ್ರ ಟೆಂಡರ್ ಕರೆಯಲಾಗಿದ್ದು, ಉಳಿದೆರಡು ಪ್ರಮುಖ ಕಾಮಗಾರಿಗಳಾದ ತಿಪ್ಪಗೊಂಡನಹಳ್ಳಿ ಸಿಆರ್​ಎಸ್ (ಚಾಮರಾಜ ಸಾಗರ) ಪುನಶ್ಚೇತನ ಹಾಗೂ ಟಿ.ಜಿ. ಹಳ್ಳಿ ಜಲಾನಯನ ಪ್ರದೇಶದ ಸುತ್ತ ತಂತಿಬೇಲಿ ನಿರ್ಮಾಣ ಕಾಮಗಾರಿಗಳು ಅವಶ್ಯಕತೆ ಇಲ್ಲವೆಂದು ಕೈಬಿಡಲಾಗಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.

2003ರ ಅಧಿಸೂಚನೆ ಪ್ರಕಾರ ತಿಪ್ಪಗೊಂಡನಹಳ್ಳಿ ಜಲಾಶಯದ ಜಲಾನಯನ ಪ್ರದೇಶದ ವಲಯ 3ರಲ್ಲಿ ಅರ್ಕಾವತಿ ಮತ್ತು ಕುಮುದ್ವತಿ ನದಿ ತೀರದ ಅಂಚಿನಿಂದ 1 ಕಿ.ಮೀ. ವ್ಯಾಪ್ತಿವರೆಗೆ ಸಂರಕ್ಷಣಾ ವಲಯ ಎಂದು ಗುರುತಿಸಲಾಗಿತ್ತು. ಪೂರ್ವಾನುಮತಿ ಇಲ್ಲದೆ ಈ ಪ್ರದೇಶದಲ್ಲಿ ಕೃಷಿಯೇತರ ಚಟುವಟಿಕೆ ಕೈಗೊಳ್ಳುವುದನ್ನು ನಿರ್ಬಂಧಿಸಲಾಗಿತ್ತು. ಆದರೆ, ಸರ್ಕಾರ ಇದೀಗ ಈ ಸಂರಕ್ಷಣಾ ವಲಯದ ವ್ಯಾಪ್ತಿಯನ್ನು 500 ಮೀ.ಗೆ ಇಳಿಸಿದೆ.

ಜಲಾನಯನದ ಸಾಕಷ್ಟು ಪ್ರದೇಶ ಈಗಾಗಲೆ ಒತ್ತುವರಿಯಾಗಿದೆ. ಹೀಗೆ ಮುಂದುವರಿದರೆ ಮುಂದೊಂದು ದಿನ ಜಲಾನಯನದ ಪ್ರದೇಶವೇ ಇಲ್ಲವಾಗುತ್ತದೆ ಎಂದು ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

260 ಕೋಟಿ ರೂ. ವೆಚ್ಚ: ಪುನಶ್ಚೇತನ ಯೋಜನೆಯ ಮೊದಲ ಹಂತದಲ್ಲಿ 260.34 ಕೋಟಿ ರೂ. ವೆಚ್ಚದಲ್ಲಿ 4 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಜಲಾಶಯದ ಬಳಿ 20 ದಶಲಕ್ಷ ಲೀಟರ್ ಸಾಮರ್ಥ್ಯದ ನೀರು ಸಂಸ್ಕರಣಾ ಘಟಕ ಹಾಗೂ ಕೊಳಚೆನೀರು ಪಂಪಿಂಗ್ ಕೇಂದ್ರ ನಿರ್ಮಾಣವಾಗಲಿದೆ. ಈ ಘಟಕವು ಅರ್ಕಾವತಿ ನದಿ ನೀರು ಹಾಗೂ ಎತ್ತಿನಹೊಳೆಯಿಂದ ಬರುವ ನೀರನ್ನು ಸಂಸ್ಕರಿಸಲಿದೆ. ಇದೇ ಜಾಗದಲ್ಲಿ 110 ಎಂಎಲ್​ಡಿ ಸಾಮರ್ಥ್ಯದ 4 ಹಳೆಯ ಎಸ್​ಟಿಪಿಗಳಿವೆ. ಇವುಗಳ ಪೈಕಿ 3 ಘಟಕಗಳನ್ನು ಹೊಸ ತಂತ್ರಜ್ಞಾನದೊಂದಿಗೆ ಮೇಲ್ದರ್ಜೆಗೇರಿಸಲಾಗುತ್ತಿದೆ. ಜಲಾಶಯದಲ್ಲಿರುವ ಪಂಪ್ ಹೌಸ್​ಗಳನ್ನು ಮೇಲ್ದರ್ಜೆಗೇರಿಸುವುದು ಹಾಗೂ ಬೆಂಗಳೂರಿಗೆ 22 ಕಿ.ಮೀ. ಉದ್ದದ ಉಕ್ಕಿನ ಕೊಳವೆಮಾರ್ಗ ಅಳವಡಿಸುವುದು ಈ ಯೋಜನೆಯ ಭಾಗವಾಗಿದೆ.

ಪುನಶ್ಚೇತನ ಉದ್ದೇಶವೇನು?

ಜಲಮಂಡಳಿಯು ನಗರಕ್ಕೆ ಪ್ರತಿ ದಿನ 1,400 ದಶಲಕ್ಷ ಲೀಟರ್ ನೀರು ಸರಬರಾಜು ಮಾಡುತ್ತಿದೆ. ಟಿ.ಜಿ. ಹಳ್ಳಿ ಜಲಾಶಯ ನವೀಕರಣ ನಂತರ 110 ದಶಲಕ್ಷ ಲೀಟರ್ ನೀರು ಸಿಗಲಿದೆ. ಇದೂ ಸೇರಿ ಒಟ್ಟು 1,510 ದಶಲಕ್ಷ ಲೀಟರ್ ನೀರು ಪೂರೈಸುವ ಉದ್ದೇಶದಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಯಶವಂತಪುರ, ಮಲ್ಲೇಶ್ವರ, ವಿಜಯನಗರ ಮತ್ತು ಯಲಹಂಕದ 10 ಲಕ್ಷ ಜನರಿಗೆ ಕುಡಿಯುವ ನೀರು ಒದಗಿಸುವುದು ಇದರ ಉದ್ದೇಶವಾಗಿದೆ.

143 ಕೋಟಿ ರೂಪಾಯಿ ಸಾಲ

ಟಿ.ಜಿ. ಹಳ್ಳಿ ಜಲಾಶಯದ ಪುನಶ್ಚೇತನ ಕಾಮಗಾರಿಗಾಗಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದಿಂದ (ಕೆಯುಐಡಿಎಫ್​ಸಿ) ಶೇ.6.5 ಬಡ್ಡಿದರದಲ್ಲಿ 143 ಕೋಟಿ ರೂ. ಸಾಲ ಪಡೆಯಲಾಗುತ್ತಿದೆ. ಯೋಜನೆ ಶೇ.50 ಭಾಗವಾಗಿರುವ ಈ ಮೊತ್ತವನ್ನು ಮೆಗಾಸಿಟಿ ರಿವಾಲ್ವಿಂಗ್ ಫಂಡ್ಸ್ (ಎಂಸಿಆರ್​ಎಫ್) ಸ್ಕೀಂನಿಂದ ಪಡೆಯಲು ಸರ್ಕಾರ ನಿರ್ದೇಶನ ನೀಡಿದೆ. ಸರ್ಕಾರದ ಅನುದಾನದಿಂದ ಶೇ.25 ( 71.5 ಕೋಟಿ ರೂ.), ಜಲಮಂಡಳಿ ಅನುದಾನದಲ್ಲಿ 71.5 ಕೋಟಿ ರೂ. ಪಡೆಯಲು ಸೂಚಿಸಲಾಗಿದೆ.

| ದ್ವಾರಕಾನಾಥ್ ಎಲ್. ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net