

ಚಿಕ್ಕೋಡಿ: ಮಹಿಳೆಯರಲ್ಲಿ ಇರುವ ಸಂಘಟನಾ ಶಕ್ತಿ ಮತ್ತು ಅಭಿವೃದ್ಧಿ ಹೊಂದುವ ಮನೋಭಾವನೆಯನ್ನು ಮೊದಲು ಗುರುತಿಸಿದವರು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದವರು ಎಂದು ಶಾಸಕ ದುರ್ಯೋಧನ ಎಂ. ಐಹೊಳೆ ಹೇಳಿದರು.
ಚಿಕ್ಕೋಡಿ ತಾಲೂಕಿನ ಹತ್ತರವಾಟ ಗ್ರಾಮದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ನಾಟಕ ಸರ್ಕಾರದ ಕೆರೆ ಸಂಜೀವಿನಿ ಯೋಜನೆ ಹಾಗೂ ನಾಗನಾಥ ಕೆರೆ ಬಳಕೆದಾರರ ಸಂಘದ ಜಂಟಿ ಆಶ್ರಯದಲ್ಲಿ ಪುನಶ್ಚೇತನಗೊಂಡ ನಾಗನಾಥ ಕೆರೆ ಹಸ್ತಾಂತರ ಹಾಗೂ ಬಾಗಿನ ಅರ್ಪಣೆ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿ, ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಚಿಂತನೆಗಳು ಕುಟುಂಬ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಪರವಾಗಿರುತ್ತದೆ. ಸ್ವಸಹಾಯ ಸಂಘಗಳಿಂದ ಮಹಿಳೆಯರು ಆರ್ಥಿಕವಾಗಿ ಸಬಲೀಕರಣಗೊಳ್ಳುತ್ತಿದ್ದಾರೆ ಎಂದರು. ಸರ್ಕಾರದಿಂದ ಅನುದಾನ ಮಂಜೂರುಗೊಂಡಿದ್ದರೂ ತಾಂತ್ರಿಕ ಕಾರಣದಿಂದ ಕೆರೆ ಕಾಮಗಾರಿ ಆಗಿರಲಿಲ್ಲ. ಇದೀಗ ಧರ್ಮಸ್ಥಳ ಸಂಸ್ಥೆ ಈ ಕೆಲಸ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಕೆರೆಯನ್ನು ಸ್ವಚ್ಛವಾಗಿಟ್ಟುಕೊಂಡು ಪೂಜ್ಯರಿಗೆ ಅಭಾರಿಯಾಗಿರೋಣ ಎಂದರು.
ಜಿ.ಪಂ ಮಾಜಿ ಸದಸ್ಯ ಮಹೇಶ ಭಾತೆ ಮಾತನಾಡಿ, ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಯೋಜನೆ ಈ ನಾಗನಾಥ ಕೆರೆಯನ್ನು ಸರ್ಕಾರದಿಂದ 2.60 ಲಕ್ಷ ವೆಚ್ಚದಲ್ಲಿ ಹೂಳು ತೆಗೆದಿದ್ದು ಹತ್ತರವಾಟ ಗ್ರಾಮದ 700 ಮನೆಗಳಿಗೆ ಕುಡಿಯುವ ನೀರಿನ ಯೋಜನೆಯ ಲಾಭ ಸಿಗಲಿದೆ ಎಂದರು.
ಕೆರೆಯಲ್ಲಿ ನೀರು ಬತ್ತಿ ಹೋಗಿ ಗ್ರಾಮೀಣ ಭಾಗದ ಬಾವಿಯ ಅಂತರ್ಜಲ ಕಡಿಮೆಯಾಗಿ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತಿತ್ತು. ಈ ಬಾರಿ ಕೆರೆ ಹೂಳು ತೆಗೆದಿದ್ದು ಮಳೆಯ ನೀರು ಸಂಗ್ರಹವಾಗಿ ಕೆರೆ ಭರ್ತಿಯಾಗಿದೆ ಎಂದರು.
ಕೆರೆಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಚಿಕ್ಕೋಡಿ ವಿಭಾಗದ ಜಿಲ್ಲಾ ನಿರ್ದೇಶಕ ಟಿ. ಕೃಷ್ಣ ಬಾಗಿನ ಸಮರ್ಪಣೆ ಮಾಡಿದರು. ಕೆರೆಯ ಬದುವಿನ ಮೇಲೆ ಅತಿಥಿಗಳಿಂದ 50 ಅರಣ್ಯ ಜಾತಿಯ ಗಿಡವನ್ನು ನೆಡಲಾಯಿತು.
ನಾಗನಾಥ ಕೆರೆ ಬಳಕೆದಾರರ ಸಂಘದ ಅಧ್ಯಕ್ಷ ರಮೇಶ ಕಮತೆ, ಜಿಲ್ಲಾ ಪಂಚಾಯಿತಿ ಸದಸ್ಯೆ ಲಕ್ಷ್ಮೀ ಕುರುಬರ, ತಾ.ಪಂ. ಸದಸ್ಯ ಕಲ್ಲಪ್ಪ ರಾಚನ್ನವರ, ವಿಜಯ ಕೋಟಿವಾಲೆ, ರವೀಂದ್ರ ಹಿರೇಕೋಡಿ, ಉಪಾಧ್ಯಕ್ಷ ರಾಜು ಕೆಳಗಿನಮನಿ , ತಾಲೂಕಾ ಯೋಜನಾಧಿಕಾರಿ ರಾಘವೇಂದ್ರ ಬಿ, ಕೃಷಿ ಅಧಿಕಾರಿ ಕುಮಾರ ಬಣಕಾರ ನಾಗನಾಥ ಕೆರೆ ಬಳಕೆದಾರರ ಸಂಘದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.