

ಹೊನ್ನಾಳಿ: ಪಟ್ಟಣ ಸಮೀಪದ ಹಿರೇಮಠ ಹೊರವಲಯದಲ್ಲಿರುವ ಕೆರೆಯ ನೀರನ್ನು ಪಂಪ್ಸೆಟ್ ಮೂಲಕ ಖಾಲಿ ಮಾಡಿಸಿ, ಮೀನು ಹಿಡಿಯಲು ಮುಂದಾಗಿದ್ದ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿಗಳಿಗೆ ಇಲ್ಲಿನ ತಹಸೀಲ್ದಾರ್ ಪಟ್ಟರಾಜಗೌಡ ಅವರು ಸೂಚನೆ ನೀಡಿದ್ದಾರೆ.
ಏಳುಮಲೈ ಎಂಬಾತ ಬಹಳ ವರ್ಷಗಳಿಂದ ಕೆರೆಯಲ್ಲಿ ಮೀನಿನ ಮರಿಬಿಟ್ಟು ಮೀನು ಸಾಕಣೆ ಮಾಡುತ್ತಿದ್ದನು. ಕೆರೆ ಪುರಸಭೆ ವ್ಯಾಪ್ತಿಗೆ ಸೇರಿದ್ದು, ಇಲ್ಲಿ ಮೀನು ಸಾಕಣೆಗೆ ಕಾನೂನುಬದ್ಧವಾಗಿ(ಟೆಂಡರ್ ಮೂಲಕ) ಅನುಮತಿ ಪಡೆದುಕೊಂಡಿರಲಿಲ್ಲ ಎಂದು ತಹಸೀಲ್ದಾರ್ ತಿಳಿಸಿದ್ದಾರೆ.
ಬುಧವಾರ ಕೆರೆಯಲ್ಲಿದ್ದ ಮೀನುಗಳನ್ನು ಹಿಡಿಯಲು ಎರಡು ಪಂಪ್ಸೆಟ್ಗಳನ್ನು ಬಳಸಿ ನೀರು ಖಾಲಿ ಮಾಡುತ್ತಿದ್ದ ಸಂದರ್ಭದಲ್ಲಿ ಪುರಸಭೆ ಅಧಿಕಾರಿಗಳು ಆತನ ಎರಡು ಪಂಪ್ಸೆಟ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಟಿ. ಲೀಲಾವತಿ ಮಾತನಾಡಿ, ಕೆರೆ ಪುರಸಭೆ ವ್ಯಾಪ್ತಿಗೆ ಒಳಪಡುವುದರಿಂದ ಕರೆಯಲ್ಲಿ ಮೀನು ಬಿಡುವ ಮುನ್ನ ಅನುಮತಿ ಪಡೆಯಬೇಕು. ಆದರೆ ಈತ ಯಾವುದೇ ಅನುಮತಿ ಪಡೆದಿಲ್ಲ. ಅಲ್ಲದೇ ಕೆರೆಯ ನೀರನ್ನು ಹರಿಬಿಡುತ್ತಿರುವುದು ಅಕ್ಷಮ್ಯ ಎಂದರು.
ಆರೋಗ್ಯ ನಿರೀಕ್ಷಕ ಪರಮೇಶ್ವರನಾಯ್ಕ, ಕಂದಾಯ ಅಧಿಕಾರಿ ಮೋಹನ್, ಮುಖಂಡರಾದ ಗಿರೀಶ್ ಇತರರು ಹಾಜರಿದ್ದರು.