

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೆರೆಗಳ ರಕ್ಷಣೆಗೆ ತೀವ್ರ ಹೋರಾಟ ನಡೆಸುತ್ತಿರುವ ತಾಲೂಕಿನ ಅರ್ಕಾವತಿ ನದಿ ಹೋರಾಟ ಸಮಿತಿ ಸದಸ್ಯರು ಶನಿವಾರ ಮಾಲಿನ್ಯ ನಿಯಂತ್ರಣ ಅಧಿಕಾರಿಯ ಬೆದರುಬೊಂಬೆಗೆ ಪೂಜೆ ಸಲ್ಲಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕು ಮಜರಾಹೊಸಹಳ್ಳಿ ಪಂಚಾಯತಿ ವ್ಯಾಪ್ತಿಯಲ್ಲಿಯ ಚಿಕ್ಕತುಮಕೂರು ಕೆರೆ ಆವರಣದಲ್ಲಿ ಮಾಲಿನ್ಯ ನಿಯಂತ್ರಣ ಅಧಿಕಾರಿ ಬೆದರುಗೊಂಬೆ ನಿಲ್ಲಿಸಿ, ನಮ್ಮನ್ನು ಕಾಪಾಡಿ, ಸರ್ಕಾರದ ಕೆಲಸ ದೇವರ ಕೆಲಸ ಎನ್ನುತ್ತಾರೆ, ನೀವೆ ನಮ್ಮ ಪಾಲಿಗೆ ದೇವರು ಆದ್ದರಿಂದ ಈ ಭಾಗದ ಕೈಗಾರಿಕೆಗಳಿಂದ ಕೆರೆಗಳಿಗೆ ಸೇರುತ್ತಿರುವ ರಾಸಾಯನಿಕಯುಕ್ತ ನೀರಿಗೆ ಕಡಿವಾಣ ಹಾಕಿ ಎಂದು ಬೇಡಿಕೊಳ್ಳುತ್ತೇವೆ ಎಂದು ಪೂಜೆ ಸಲ್ಲಿಸಲಾಯಿತು. ತೆಂಗಿನಕಾಯಿ ಒಡೆದು, ಹೂವಿನ ಹಾರ ಹಾಕಿ ಕರ್ಪೂರ ಬೆಳಗುವ ಮೂಲಕ ಕೆರೆಗಳನ್ನು ಉಳಿಸಿ ಎಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ದೊಡ್ಡಬಳ್ಳಾಪುರಕ್ಕೆ ಬನ್ನಿ: ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಪ್ರಸ್ತುತ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಅಧಿಕಾರಿಗಳು ಅಲ್ಲಿ ಕುಳಿತು ಇಲ್ಲಿನ ಪರಿಸ್ಥಿತಿ ಮಾನಿಟರ್ ಮಾಡುತ್ತಿದ್ದಾರೆ ಇದರಿಂದ ಯಾವುದೇ ಪ್ರಯೋಜವಾಗಿಲ್ಲ ಸ್ಥಳಕ್ಕೆ ಭೇಟಿ ನೀಡಿ ಎಂದು ಪರಿಪರಿಯಾಗಿ ಕೇಳಿಕೊಂಡರೂ ಅಧಿಕಾರಿಗಳು ಕಿವಿಕೊಡುತ್ತಿಲ್ಲ, ಈ ಬಗ್ಗೆ ಸಾಕಷ್ಟು ಹೋರಾಟ ಮಾಡಿದ್ದೇವೆ, ಸಾಕಷ್ಟು ಮನವಿಪತ್ರಗಳನ್ನು ನೀಡಿದ್ದೇವೆ ಆದರೂ ಅಧಿಕಾರಿಗಳು ಈ ಕಡೆ ಗಮನ ನೀಡುತ್ತಿಲ್ಲ ದೊಡ್ಡಬಳ್ಳಾಪುರಕ್ಕೆ ಕಚೇರಿ ಸ್ಥಳಾಂತರಗೊಂಡರೆ ಆಗ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬಹುದು, ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬಹುದು ಎಂಬ ನಿರೀಕ್ಷೆ ಇದೆ ಎಂದು ಸಮಿತಿ ಹೋರಾಟಗಾರರು ತಿಳಿಸಿದ್ದಾರೆ.
ಕೀ ಕೊಟ್ಟರೂ ಬರಲ್ಲ: ದೊಡ್ಡಬಳ್ಳಾಪುರದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಚೇರಿ ಇಲ್ಲ ಅಂತಾ ಸಬೂಬು ಹೇಳುತ್ತಾರೆ, ಈ ಹಿಂದೆ ಜಿಲ್ಲಾಧಿಕಾರಿಗಳೇ ಇಲ್ಲಿನ ಐಬಿಯಲ್ಲಿನ ಕೊಠಡಿಯೊಂದನ್ನು ತಾತ್ಕಾಲಿಕವಾಗಿ ಬಳಸುವಂತೆ ಕೊಠಡಿಯ ಕೀ ನೀಡಲು ಮುಂದಾಗಿದ್ದರು. ಆದರೆ ಅಧಿಕಾರಿಗಳು ಹಿಂದೇಟು ಹಾಕುತ್ತಾರೆ, ಪ್ರವಾಸಿ ಮಂದಿರದಲ್ಲಿ ವಾಷ್‌ರೂಂ ಸರಿಯಿಲ್ಲ ಎಂದು ಹೇಳುತ್ತಾರೆ ಇಂಥ ಅಧಿಕಾರಿಗಳಿಗಳಿಂದ ಪ್ರಾಮಾಣಿಕವಾಗಿ ಸಾರ್ವಜನಿಕ ಕೆಲಸವನ್ನು ನಿರೀಕ್ಷಿಸುವುದಾದರೂ ಹೇಗೆ ಎಂದು ಅರ್ಕಾವತಿ ನದಿ ಹೋರಾಟ ಸಮಿತಿ ಸದಸ್ಯ ವಸಂತ್ ಬೇಸರ ವ್ಯಕ್ತಪಡಿಸಿದ್ದಾರೆ.
ಮಳೆ ನೀರಿನೊಂದಿಗೆ ಹರಿವು: ಬಾಶೆಟ್ಟಿ ಕೈಗಾರಿಕಾ ಪ್ರದೇಶದಿಂದ ಹರಿದುಬರುತ್ತಿರುವ ರಾಸಾಯನಿಕಯುಕ್ತ ನೀರು ಮಳೆಕಾಲುವೆಗಳ ಮೂಲಕ ಚಿಕ್ಕತುಮಕೂರು ಕೆರೆ ಸೇರುತ್ತಿದೆ ಇಲ್ಲಿಂದ ದೊಡ್ಡತುಮಕೂರು ಕೆರೆಗೆ ಹರಿಯುತ್ತದೆ ಅಲ್ಲಿಂದ ಕಾಕೋಳೂ ಹೆಸರುಘಟ್ಟ ಕೆರೆ ಒಡಲು ಸೇರುತ್ತಿದೆ, ಈಗಾಗಲೇ ಈ ಭಾಗದ ಕೊಳವೆಬಾವಿಗಳಲ್ಲಿನ ನೀರು ಕಪ್ಪುಬಣ್ಣಕ್ಕೆ ತಿರುಗಿದೆ, ಬಳಸಲು ಯೋಗ್ಯವಾಗದಂತೆ ಗಬ್ಬುವಾಸನೆ ಬರುತ್ತಿದೆ ಅಂತರ್ಜಲ ಕಲುಷಿತಗೊಳ್ಳುತ್ತಿದ್ದು ಮುಂದಿನ ಪೀಳಿಗೆಗೆ ಮರಣಶಾಸನ ಬರೆಯುವಂತಾಗಿದೆ ಎಂದು ಸಮಿತಿ ಸದಸ್ಯ ಕಾಳೇಗೌಡ ಆತಂಕ ವ್ಯಕ್ತಪಡಿಸಿದರು.
ತಾಲೂಕಿನಾದ್ಯಂತ ಮೆರವಣಿಗೆ ಎಚ್ಚರಿಕೆ:
ದಶಕಗಳಿಂದಲೂ ಇಲ್ಲಿನ ಜಲಮೂಲಗಳ ರಕ್ಷಣೆಗೆ ಹೋರಾಟ ನಡೆಸುತ್ತಿದ್ದರೂ ಅಧಿಕಾರಿಗಳು ಯಾವುದೇ ಶಾಶ್ವತ ಕ್ರಮಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಎಲ್ಲ ಗ್ರಾಮಗಳ ಜನರೊಂದಿಗೆ ಮೆರವಣಿಗೆ ನಡೆಸುವ ಮೂಲಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ಬಿಸಿ ಮುಟ್ಟಿಸಲಾಗುವುದು ಎಂದು ಹೋರಾಟಗಾರರು ಎಚ್ಚರಿಕೆ ನೀಡಿದರು.