ಸರೋವರ ದಡದಲ್ಲಿ ಧ್ವಜಾರೋಹಣ

6Jaggu2-web
ನರೇಗಾದಡಿ ಬೆಳಗಾವಿಯಲ್ಲಿ ನಿರ್ಮಿಸಿದ ಅಮೃತ ಸರೋವರ.
Published on

ಬೆಳಗಾವಿ:ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಜಿಲ್ಲೆಯಲ್ಲಿ 75 ಅಮೃತ ಸರೋವರಗಳನ್ನು ಪುನಶ್ಚೇತನ ಮತ್ತು ನಿರ್ಮಾಣ ಮಾಡಲಾಗಿದ್ದು, ಆ. 15ರಂದು 76ನೇ ಸ್ವಾತಂತ್ರ್ಯ ದಿನಾಚರಣೆಯಂದು ಅಮೃತ ಸರೋವರದ ಸ್ಥಳಗಳಲ್ಲಿ ಧ್ವಜಾರೋಹಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸ್ವಾತಂತ್ರ್ಯ ಹೋರಾಟಗಾರರು, ಅವರ ಕುಟುಂಬಸ್ಥರು, ಹುತಾತ್ಮರ ಕುಟುಂಬಸ್ಥರು, ಪದ್ಮಪುರಸ್ಕಾರ ಪಡೆದವರು, ಹಿರಿಯ ನಾಗರಿಕರಿಂದ ಧ್ವಜಾರೋಹಣ ನೆರವೇರಿಸುವಂತೆ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನಿರ್ದೇಶನ ಬಂದಿದೆ. ಚುನಾಯಿತ ಪ್ರತಿನಿಧಿಗಳು, ಎಸ್.ಎಚ್.ಜಿ, ಯುವರಕು, ಕೆರೆ ಬಳಕೆದಾರರ ಸಂಘ (ಯುಸರ್ ಗ್ರೂಪ್) ಮತ್ತು ಶಾಲಾ-ಕಾಲೇಜುಗಳ ಮಕ್ಕಳ ನೇತೃತ್ವದಲ್ಲಿ ಹಲವು ಚಟುವಟಿಕೆ ಹಾಗೂ ಕಾರ್ಯಕ್ರಮ ಹಮ್ಮಿಕೊಳ್ಳಲು ಸಿದ್ಧತೆ ನಡೆದಿದೆ.

ತಿರಂಗಾ ಯಾತ್ರೆ: ತಿರಂಗಾ ಯಾತ್ರೆಯನ್ನು ಬೆಳಗ್ಗೆ ಇಡೀ ಗ್ರಾಮವನ್ನು ಸಂಚರಿಸಿ ತದನಂತರ ಅಮೃತ ಸರೋವರ ಸ್ಥಳಗಳಲ್ಲಿ ಮುಕ್ತಾಯಗೊಳಿಸುವುದು. ನಂತರ, ಗ್ರಾಮ ಸಮುದಾಯದ ಸದಸ್ಯರಲ್ಲಿ ಅಮೃತ ಸರೋವರಗಳ ಸುತ್ತಲಿನ ಮತ್ತು ನೀರಿನ ಸ್ವಚ್ಛತೆ ಕಾಪಾಡುವಂತೆ ಖಚಿತಪಡಿಸಿಕೊಳ್ಳಲು ಪ್ರತಿಜ್ಞೆ ಕೈಗೊಳ್ಳಲಾಗುತ್ತದೆ. ಅಮೃತ ಸರೋವರ ಸ್ಥಳಗಳಲ್ಲಿ ಸಸಿಗಳನ್ನು ನೆಡುವುದು ಮತ್ತು ಅವುಗಳ ಆರೈಕೆ ಮಾಡುವುದಕ್ಕೆ ಕಾರ್ಯಕ್ರಮ ರೂಪಿಸಲಾಗಿದೆ. ಮೇರಾ ಅಮೃತ ಸರೋವರ ಹ್ಯಾಸ್ ಟ್ಯಾಗ್‌ನೊಂದಿಗೆ ಕಾರ್ಯಕ್ರಮ ವಿವರದ ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಪ್ರಮಾಣ ಪತ್ರ ವಿತರಣೆ: ಸ್ವಾತಂತ್ರೊೃೀತ್ಸವದಂದು ಅಮೃತ ಸರೋವರದಲ್ಲಿ ಮಕ್ಕಳಿಗೆ ಚಿತ್ರಕಲೆ, ಘೋಷಣೆ ಬರೆಯುವುದು, ರಂಗೋಲಿ, ಭಾಷಣ ಸೇರಿ ಸ್ಪರ್ಧಾತ್ಮಕ ಚಟುವಟಿಕೆ ಆಯೋಜಿಸಲಾಗಿದೆ. ಖೋ-ಖೋ, ಲಗೋರಿ, ಹಗ್ಗ-ಜಗ್ಗಾಟ, ಹಗ್ಗ ಜಿಗಿತ, ಕುಂಟ ಓಟ, ಕುರ್ಚಿ ಓಟ ಆಯೋಜಿಸಲಾಗುತ್ತಿದೆ. ಅಮೃತ ಸರೋವರ ನೀರಿನ ಬಳಕೆ ಮತ್ತು ಸುತ್ತಲಿನ ನಿರ್ವಹಣೆಗೆ ಸಂಬಂಧಿಸಿದಂತೆ ಬಳಕೆದಾರರ ಗುಂಪಿಗೆ ಹಕ್ಕುಗಳ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಶಿಲಾಫಲಕ ಸಮರ್ಪಣೆ: ಸರ್ವೋಚ್ಚ ತ್ಯಾಗ ಮಾಡಿದ ಎಲ್ಲ ಧೈರ್ಯಶಾಲಿಗಳಿಗೆ (ವೀರರು) ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ವೀರರಾಗಿರುವ ಸ್ವಾತಂತ್ರ್ಯ ಹೋರಾಟಗಾರರು, ರಕ್ಷಣಾ ಸಿಬ್ಬಂದಿ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಅಧಿಕಾರಿಳು, ಸಿಬ್ಬಂದಿ (ರಾಜ್ಯ ಪೊಲೀಸರು ಸೇರಿ) ಕರ್ತವ್ಯದಲ್ಲಿ ಪ್ರಾಣ ತ್ಯಾಗ ಮಾಡಿದ ವೀರರ ಹೆಸರನ್ನು ಶಿಲಾಫಲಕದಲ್ಲಿ ಬರೆದು ಎಲ್ಲಾ ಅಮೃತ ಸರೋವರಗಳ ಸ್ಥಳಗಳಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಒಂದು ವೇಳೆ ಪಂಚಾಯಿತಿ ವ್ಯಾಪ್ತಿಯಲ್ಲಿ ವೀರರು ಲಭ್ಯವಿಲ್ಲದಿದ್ದಲ್ಲಿ ಸಾಮಾನ್ಯ ಸಪರ್ಪಣೆ ಶಿಲಾಫಲಕವನ್ನು ನಿರ್ಮಿಸಲಾಗುವುದು. ಈ ಎಲ್ಲ ಕಾರ್ಯಕ್ರಮಗಳನ್ನು ಅಮೃತ ಸರೋವರ ಕೆರೆಯ ದಂಡೆ ಮೇಲೆ ಆ.15 ರಂದು ಕೈಗೊಳ್ಳಲಾಗುತ್ತಿದೆ.

ಅಮೃತ ಮಹೋತ್ಸವ ಅಂಗವಾಗಿ ನರೇಗಾದಡಿ ಜಿಲ್ಲೆಯಲ್ಲಿ ನಿರ್ಮಿಸಿದ 75 ಅಮೃತ ಸರೋವರ ಸ್ಥಳಗಳಲ್ಲಿ ಆ.15ರಂದು ತಿರಂಗಾ ಯಾತ್ರೆ, ಸ್ವಚ್ಛತಾ ಪ್ರತಿಜ್ಞೆ, ಶಿಲಾಫಲಕ ಸಮರ್ಪಣೆ ಸೇರಿ ಹಲವಾರು ವಿಶಿಷ್ಠ ಕಾರ್ಯಕ್ರಮ ಆಯೋಜಿಸಲಾಗಿದೆ.| ಹರ್ಷಲ್ ಭೊಯರ್ ಜಿಪಂ ಸಿಇಒ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net