

ಮಂಡ್ಯ: ಜಿಲ್ಲಾಡಳಿತದ ವತಿಯಿಂದ ಈಗಾಗಲೇ ಸಮೀಕ್ಷೆ ನಡೆಸಿ 962 ಕೆರೆದ ಅಳತೆಯನ್ನು ನಿಗದಿಪಡಿಸಲಾಗಿಸಿದೆ. ಅದರಂತೆ ಕೆರೆ ಒತ್ತುವರಿ ತೆರವುಗೊಳಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೆರೆ ಒತ್ತುವರಿ ತೆರವು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಲಾಖಾವಾರು ವ್ಯಾಪ್ತಿಯ ಕೆರೆ ಒತ್ತುವರಿ ಹಾಗೂ ತೆರವುಗೊಳಿಸಿದ ವಿವರ ಸಲ್ಲಿಸಬೇಕು. ಈಗಾಗಲೇ ಕೆರೆಗಳ ಸರ್ವೆ ಮಾಡಿಕೊಡಲಾಗಿದೆ. ಮುಂದಿನ ಹಂತದಲ್ಲಿ ಅಧಿಕಾರಿಗಳು ಮಹಜರ್ ಮಾಡಿ ಒತ್ತುವರಿ ತೆರವುಗೊಳಿಸಿ ಜಿಲ್ಲಾಡಳಿತಕ್ಕೆ ವರದಿ ನೀಡಿ ಎಂದರು.
ಮುಖ್ಯವಾಗಿ ಕೆರೆಗಳ ಸಂರಕ್ಷಣೆ ಮಾಡಿಕೊಳ್ಳಲು ಯೋಜನೆ ರೂಪಿಸಿಕೊಂಡು ಅನುದಾನ ಪಡೆದು ಕ್ರಮಕೈಗೊಳ್ಳಿ. ಕೆರೆಗಳ ಸುತ್ತ ಆಗಿಂದ್ದಾಗೆ ಪರಿಶೀಲನೆ ನಡೆಸಿ ಒತ್ತುವರಿಯಾಗದಂತೆ ನೋಡಿಕೊಳ್ಳಿ. ಕೆರೆ ಒತ್ತುವರಿ ತೆರವು ಕುರಿತು ಸರ್ಕಾರಕ್ಕೆ ವರದಿ ನೀಡಬೇಕಿದ್ದು, ವರದಿಯನ್ನು ಶೀಘ್ರವಾಗಿ ಸಲ್ಲಿಸಿ. ಅಂತೆಯೇ ಕೆರೆ ಒತ್ತುವರಿ ಮಾಡಿಕೊಳ್ಳುವವರ ವಿರುದ್ದ ಕಾನೂನು ರೀತಿ ಶಿಸ್ತಿನ ಕ್ರಮ ಕೈಗೊಳ್ಳಿ ಎಂದ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ, ಎಚ್‌ಎಲ್ಬಿಸಿ, ಕಾವೇರಿ ನೀರಾವರಿ ನಿಗಮ ಹಾಗೂ ಸಣ್ಣ ನೀರಾವರಿ ಇಲಾಖೆಗೆ ಒಳಪಡುವ 962 ಕೆರೆಗಳ ನೀರನ್ನು ಪರೀಕ್ಷೆಗೊಳಪಡಿಸಬೇಕು. ಮಾತ್ರವಲ್ಲದೆ ಪ್ರತಿ ಕೆರೆಗೂ ಸಹ ಜಿಪಿಎಸ್ ಮ್ಯಾಪಿಂಗ್ ಕಡ್ಡಾಯವಾಗಿ ಮಾಡಿಸಿ. ಕೆರೆ ನೀರು ಕಲುಷಿತವಾಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿ. ಸಾರ್ವಜನಿಕರು ಕೆರೆಗಳನ್ನು ಕಲುಷಿತ ಮಾಡದಂತೆ ಜಾಗೃತಿ ಸೂಚನಾ ಫಲಕಗಳನ್ನು ಅಳವಡಿಸಿ, ಅದರ ಛಾಯಾಚಿತ್ರದ ವರದಿ ಸಲ್ಲಿಸಿ ಎಂದು ಸೂಚಿಸಿದರು.
ಸಾರ್ವಜನಿಕರು ಕೆರೆ ಕಲುಷಿತಗೊಳಿಸದಂತೆ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಿ. ಜನರಿಗೆ ಅರಿವು ಮೂಡಿಸಿ, ಕೆರೆಗಳ ನೀರನ್ನು ಕಲುಷಿತಗೊಳಿಸುವ ಸಾರ್ವಜನಿಕರ ವಿರುದ್ಧ ಕಠಿಣ ಕ್ರಮ ಜರುಗಿಸಿ. ಈ ಸಂಬಂಧ ದೂರು ನೀಡಲು ಜಿಲ್ಲಾ ಮಟ್ಟದಲ್ಲಿ ದೂರು ನಿರ್ವಹಣಾ ಕೇಂದ್ರ ಸ್ಥಾಪಿಸಬೇಕು. ಕೆರೆಗಳನ್ನು ಸಂರಕ್ಷಿಸಲು ಸ್ಥಳೀಯವಾಗಿ ಕೆರೆ ಸಂರಕ್ಷಣ ಸಮಿತಿಯನ್ನು ರಚಿಸಿ ಎಂದು ಹೇಳಿದರು.
ಸಭೆಯಲ್ಲಿ ಆಹಾರ, ನಾಗರಿಕ ಮತ್ತು ಸರಬರಾಜು ಇಲಾಖೆ ಉಪನಿರ್ದೇಶಕ ಕೃಷ್ಣಕುಮಾರ್, ಪರಿಸರ ಹಾಗೂ ವಾಯುಮಾಲಿನ್ಯ ನಿಯಂತ್ರಣ ಅಧಿಕಾರಿ ಗೀತಾ, ಜಲಮಂಡಳಿ ಎಇ ಮೇಘಾ ಇತರರಿದ್ದರು.