ರಾಣಿಕೆರೆಗೆ ರಾಜಯೋಗ : ಸೋಮೇಶ್ವರದಲ್ಲಿ ಒದಗಿಬಂತು ಅಭಿವೃದ್ಧಿ ಭಾಗ್ಯ: ಅಬ್ಬಕ್ಕ ಜಲಕ್ರೀಡೆಯಾಡುತ್ತಿದ್ದಳೆನ್ನುವ ಐತಿಹ್ಯ

New Project (6)
Published on

ಅನ್ಸಾರ್ ಇನೋಳಿ ಉಳ್ಳಾಲ

ರಾಣಿ ಅಬ್ಬಕ್ಕಳ ಜಲಕ್ರೀಡೆಯ ತಾಣವೆಂದು ಪರಿಗಣಿಸಲ್ಪಟ್ಟ ರಾಣಿಕೆರೆ ತೆರೆಮರೆಯಿಂದ ಮುಕ್ತವಾಗುವ ಸನಿಹದಲ್ಲಿದೆ. ಹಲವು ದಶಕಗಳ ಬಳಿಕ ಕೆರೆಗೆ ಅಭಿವೃದ್ಧಿ ಭಾಗ್ಯ ಒದಗಿ ಬಂದಿದೆ. ಈ ಕೆರೆಯ ತಟದಲ್ಲಿ ಕೈ ಕಡಿಯಲ್ಪಟ್ಟ ಕಲ್ಲಿನ ಮೂರ್ತಿಯೊಂದಿದ್ದು, ಇದರ ಹಿಂದೆ ಬಹುತೇಕ ಜನರಿಗೆ ಗೊತ್ತಿಲ್ಲದ ರೋಚಕ ಕಥೆಯೂ ಇದೆ. ಇದು ಸೋಮೇಶ್ವರ ‘ರಾಣಿಕೆರೆ’ಯ ಕಥೆ.

ರಾಣಿ ಅಬ್ಬಕ್ಕ ಈ ಕೆರೆಯನ್ನು ಸ್ನಾನಕ್ಕಾಗಿ ಬಳಸುತ್ತಿದ್ದರು ಎನ್ನಲಾಗಿದೆ. ಆದರೆ ಸೋಮೇಶ್ವರ ದೇವಸ್ಥಾನದ ಇನ್ನೊಂದು ಭಾಗದಲ್ಲಿ ಗದಾತೀರ್ಥ ಕೆರೆಯಿರುವ ಬಗ್ಗೆ ಮಾಹಿತಿ ಸ್ಥಳೀಯರಿಗಿದ್ದರೂ ರಾಣಿಕೆರೆಯ ಬಗ್ಗೆ ಮಾಹಿತಿ ಇರಲಿಲ್ಲ. ಅಲ್ಲದೆ ಕೆರೆಯ ಸುತ್ತಲೂ ಮರಗಿಡಗಳು ಬೆಳೆದಿದ್ದರಿಂದ ಯಾರೂ ಹೋಗುತ್ತಿರಲಿಲ್ಲ. ಆದರೆ ಸನಿಹದಲ್ಲೇ ಇದ್ದ ದೇವಸ್ಥಾನದ ಪ್ರಧಾನ ಅರ್ಚಕರಿಗೆ ಇದರ ಬಗ್ಗೆ ಮಾಹಿತಿ ಇತ್ತಲ್ಲದೆ, ಇಲ್ಲಿರುವ ನಾಗನಕಟ್ಟೆಗೆ ಪೂಜೆಯನ್ನೂ ಸಲ್ಲಿಸಲಾಗುತ್ತಿತ್ತು.

ಕೆಲವು ವರ್ಷಗಳ ಹಿಂದೆ ಸೋಮೇಶ್ವರದಲ್ಲಿ ನೀರಿನ ಸಮಸ್ಯೆ ಎದುರಾದಾಗ ಅಂದು ತಾಲೂಕು ಪಂಚಾಯಿತಿ ಸದಸ್ಯರಾಗಿದ್ದ ರವಿಶಂಕರ್ ಅವರಲ್ಲಿ ಕೆರೆಯ ಬಗ್ಗೆ ಪ್ರಧಾನ ಅರ್ಚಕ ಸೂರ್ಯನಾರಾಯಣ ಹೊಳ್ಳ ಮಾಹಿತಿ ನೀಡಿ, ಕೆರೆ ಜೀರ್ಣೋದ್ಧಾರಗೊಳಿಸಿದರೆ ನೀರಿನ ಸಮಸ್ಯೆ ನೀಗಿಸಬಹುದು ಎಂದು ತಿಳಿಸಿದ್ದರು. ಅದರಂತೆ ಮಾಹಿತಿ ಪಡೆದಿದ್ದ ಆಗಿನ ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ ಮೂರು ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿದ್ದರು. ಈ ಹಣದಲ್ಲಿ ಜೀರ್ಣೋದ್ಧಾರ ಅಸಾಧ್ಯವಾಗಿದ್ದರಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅನುದಾನಕ್ಕಾಗಿ ಮನವಿ ಮಾಡಲಾಗಿತ್ತು. ಸ್ಥಳ ಪರಿಶೀಲನೆ ನಡೆಸಲಾಗಿದ್ದರೂ ಕಾರಣಾಂತರಗಳಿಂದ ಅಭಿವೃದ್ಧಿ ಕೆಲಸ ಆರಂಭಗೊಂಡಿರಲಿಲ್ಲ.

ಮೂರ್ತಿಯ ಹಿಂದಿರುವ ಕಥೆಯೇನು?

ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸ ಈ ಕೆರೆಗಿದೆ ಎನ್ನಲಾಗಿದೆ. ಸನಿಹದಲ್ಲೇ ನಾಗನ ಕಟ್ಟೆಯೂ ಇದ್ದು ಇಂದಿಗೂ ಇಲ್ಲಿ ನಾಗರಹಾವು ಪ್ರತ್ಯಕ್ಷವಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು. ಈ ಹಿನ್ನೆಲೆಯಲ್ಲಿ ಈ ಕೆರೆಯನ್ನು ಪವಿತ್ರ ಕೆರೆಯೆಂದೂ ಹೇಳಲಾಗುತ್ತಿದೆ. ಕೆರೆಯನ್ನು ನಿರ್ಮಿಸಿದ್ದ ರಾಜ ಸನಿಹದಲ್ಲೇ ನಿಧಿಯನ್ನೂ ಹೂತಿಟ್ಟಿದ್ದ ಎನ್ನಲಾಗುತ್ತಿದೆ. ನಿಧಿ ಯಾವ ಭಾಗದಲ್ಲಿದೆ ಎಂದು ತಿಳಿಯುವ ಸಲುವಾಗಿ ಕಲ್ಲಿನ ಮೂರ್ತಿಯೊಂದನ್ನು ಕೆತ್ತಿಸಿ ಕೆರೆಯ ತಟದಲ್ಲಿ ಪ್ರತಿಷ್ಠಾಪಿಸಿ, ಮೂರ್ತಿಯ ಕೈಯನ್ನು ಮುಂದಕ್ಕೆ ಚಾಚಿ ಬೆರಳನ್ನು ನಿಧಿಯಿಟ್ಟ ಜಾಗ ತೋರಿಸುವ ಕುರುಹುವನ್ನಾಗಿ ಮಾರ್ಪಡಿಸಿದ್ದನಂತೆ. ಬಹುಕಾಲ ಬಳಿಕ ಕೆರೆ ಹಾಗೂ ನಿಧಿಯ ಬಗ್ಗೆ ವ್ಯಕ್ತಿಯೊಬ್ಬರಿಗೆ ಮಾಹಿತಿ ಲಭಿಸಿ ಕೆರೆಯ ಬಳಿ ಬಂದು ನಿಧಿ ಪತ್ತೆಹಚ್ಚಿದ್ದರು. ನಿಧಿ ಸಿಕ್ಕ ಬಳಿಕ ಮೂರ್ತಿಯ ಕೈಯನ್ನು ತುಂಡರಿಸಿ ಹೋಗಿದ್ದರು ಎನ್ನುತ್ತದೆ ಸ್ಥಳೀಯರ ಇತಿಹಾಸ.

ಸ್ಪೀಕರ್ ಯು.ಟಿ.ಖಾದರ್ ಮುತುವರ್ಜಿ

ಸ್ಪೀಕರ್ ಯು.ಟಿ.ಖಾದರ್ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿರುವ ಧಾರ್ಮಿಕ ಕ್ಷೇತ್ರಗಳು ಹಾಗೂ ಇತರ ಕೆರೆಗಳಿಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದ್ದಾರೆ. ಅಲ್ಲದೆ ಪವಿತ್ರ ಕೆರೆಗಳ ಸೌಂದರ್ಯ, ಪಾವಿತ್ರೃ ಕಾಪಾಡುವ ನಿಟ್ಟಿನಲ್ಲೂ ಯೋಜನೆ ರೂಪಿಸಿದ್ದು, ಈಗಾಗಲೇ ಕೆಲವು ಕೆರೆಗಳ ಕೆಲಸ ನಡೆಯುತ್ತಿದೆ. ಸೋಮೇಶ್ವರ ದೇವರಕೆರೆ ಎಂದು ಕರೆಯಲ್ಪಡುವ ಗದಾತೀರ್ಥ ಕೆರೆ ಈಗಾಗಲೇ ಸುಂದರಗೊಂಡಿದೆ. ರಾಣಿಕೆರೆ ಜೀರ್ಣೋದ್ಧಾರದ ಜತೆ ಸೌಂದರ್ಯಗೊಳಿಸುವ ನಿಟ್ಟಿನಲ್ಲಿ ಫೆ.19ಕ್ಕೆ ಗುದ್ದಲಿಪೂಜೆ ನೆರವೇರಿಸಿದ್ದಾರೆ.

ಹಿಂದೆ ನೀರಿನ ಸಮಸ್ಯೆ ಎದುರಾದಾಗ ಕೆರೆಯ ಅಭಿವೃದ್ಧಿಗಾಗಿ ಜಿ.ಪಂ. ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಜೀರ್ಣೋದ್ಧಾರ ಮಾಡಲು ಯೋಚಿಸಿದ್ದರೂ ಸಾಧ್ಯವಾಗಿರಲಿಲ್ಲ. ರಾಣಿಕೆರೆಯ ಇತಿಹಾಸ ಮುಂದಿನ ಪೀಳಿಗೆಗೆ ತಿಳಿಸಬೇಕಾದರೆ ಕೆರೆಯನ್ನು ಉಳಿಸುವ ಅನಿವಾರ್ಯತೆ ಇದೆ. ರವಿಶಂಕರ್ ಉಪಾಧ್ಯಕ್ಷ, ಸೋಮೇಶ್ವರ ಪುರಸಭೆ ಬೇಸಿಗೆಯಲ್ಲೂ ಈ ಕೆರೆಯ ನೀರು ಬತ್ತುವುದಿಲ್ಲ. ಅಲ್ಲದೆ ಐತಿಹಾಸಿಕ ಕೆರೆಯೂ ಇದಾಗಿದ್ದು ನಾನು ಜಿ.ಪಂ. ಸದಸ್ಯೆಯಾಗಿದ್ದಾಗ 3.50 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿದ್ದೆ. ಈಗ ಮೂಡಾ ಅನುದಾನದಲ್ಲಿ ಅಭಿವೃದ್ಧಿ ನಡೆಯುವ ವಿಚಾರ ಕೇಳಿ ಸಂತಸವಾಗಿದೆ. ಕೆಲಸ ಶೀಘ್ರ ನಡೆಯಲಿ. ಧನಲಕ್ಷ್ಮೀ ಗಟ್ಟಿ ಜಿ.ಪಂ. ಮಾಜಿ ಸದಸ್ಯೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net