ಬಾರಕೂರಿನ ರಸ್ತೆ ಬದಿ ಲಜ್ಜಾ ಗೌರಿ ವಿಗ್ರಹ!

lajja gowri
Published on

ಉಡುಪಿ/ಬ್ರಹ್ಮಾವರ: ಬಾರಕೂರಿನ ರಸ್ತೆ ಬದಿಯಲ್ಲಿ ಹತ್ತಾರು ವರ್ಷಗಳಿಂದ ಬಿದ್ದುಕೊಂಡಿರುವ ವಿಗ್ರಹವನ್ನು ಅಪರೂಪದ ಲಜ್ಜಾ ಗೌರಿ ಎಂದು ಭಾರತೀಯ ಪುರಾತತ್ವ ಇಲಾಖೆಯ ಬೆಂಗಳೂರು ವೃತ್ತದ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞ ಡಾ.ಶಿವಕಾಂತ್ ಬಾಜಪೇಯಿ ಗುರುತಿಸಿದ್ದು, ರಕ್ಷಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆರನೇ ಶತಮಾನದ ವಿಗ್ರಹ ಇದಾಗಿರಬಹುದು ಎಂದು ಅಂದಾಜಿಸಲಾಗಿದೆ. ವಿಗ್ರಹ ನಗ್ನ ರೂಪದಲ್ಲಿದ್ದು, ಫಲವತ್ತತೆ ಸಂಕೇತದಂತೆ ಕಾಣುತ್ತಿದೆ. ಸಂಶೋಧನೆ ಬಳಿಕ ಈ ಬಗ್ಗೆ ಖಚಿತ ಮಾಹಿತಿ ಸಿಗಬಹುದಾಗಿದೆ. ಕರಾವಳಿ ಜಿಲ್ಲೆಗಳ ಪ್ರವಾಸದಲ್ಲಿರುವ ಶಿವಕಾಂತ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ವಿಗ್ರಹದ ಚಿತ್ರ ಹರಿದಾಡುತ್ತಿರುವುದನ್ನು ಗಮನಿಸಿದ್ದರು. ಬಳಿಕ ಇದು ಕರಾವಳಿ ಕರ್ನಾಟಕದ ಪುರಾತನ ನಗರ ಬಾರಕೂರಿನ ಸಾರ್ವಜನಿಕ ರಸ್ತೆಯಲ್ಲಿರುವುದನ್ನು ಪತ್ತೆ ಮಾಡಿದ್ದರು. ಆಳುಪ ಸಾಮ್ರಾಜ್ಯದ ರಾಜಧಾನಿಯಾಗಿರುವ ಬಾರಕೂರು ಹಲವು ಶತಮಾನಗಳ ಕಾಲ ಅಧಿಕಾರ ಕೇಂದ್ರವಾಗಿತ್ತು.

ಇದು ಪ್ರಮುಖ ವಿಗ್ರಹವಾಗಿದ್ದು, ಪ್ರತಿದಿನ ಇದರ ಮೇಲೆಯೇ ನೂರಾರು ವಾಹನಗಳು ಸಾಗುತ್ತಿವೆ. ವಿಗ್ರಹವನ್ನು ವಶಕ್ಕೆ ಪಡೆದು ರಕ್ಷಿಸುವಂತೆ ನಮ್ಮ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಿದ್ದೇನೆ. ಈ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಯವರಿಗೂ ಇಮೇಲ್ ಮಾಡಿದ್ದೇನೆ ಎಂದು ಶಿವಕಾಂತ್ ತಿಳಿಸಿದ್ದಾರೆ.

ನೂರಾರಿವೆ ಇಂಥ ಕಲ್ಲುಗಳು: ಬಾರಕೂರಿನ ಪ್ರಾಥಮಿಕ ಅರೋಗ್ಯ ಕೇಂದ್ರದ ತಿರುವಿನ ರಸ್ತೆಯಲ್ಲಿ ಈ ವಿಗ್ರಹ ಮಣ್ಣು-ಡಾಂಬರಿನಲ್ಲಿ ಅರ್ಧ ಹುದುಗಿದ ಸ್ಥಿತಿಯಲ್ಲಿದೆ. ಅಪಘಾತ ಸ್ಥಳ ಇದಾಗಿದ್ದು, ಅನೇಕರು ಕಲ್ಲು ತಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ಮಾಧ್ಯಮಗಳು ಜಿಲ್ಲಾಧಿಕಾರಿ ಸಹಿತ ಅನೇಕರ ಗಮನ ಸೆಳೆದಿದ್ದವು. ಇಂಥ ಅನೇಕ ವಿಗ್ರಹಗಳು ಬಾರಕೂರಿನಾದ್ಯಂತ ಇದ್ದು, ಮೆಟ್ಟಿಲು, ಬಟ್ಟೆ ಒಗೆಯುವ ಕಲ್ಲುಗಳಾಗಿ ಬಳಕೆಯಾಗುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net