

ಶಿರ್ವ: ಶ್ರೀ ಕ್ಷೇತ್ರ ಅಡಪಾಡಿ ಶ್ರೀ ಉಮಾಮಹೇಶ್ವರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶಿವರಾತ್ರಿ ಮಹೋತ್ಸವ ಹಾಗೂ ವಾರ್ಷಿಕ ರಥೋತ್ಸವ ಬುಧವಾರ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಪನ್ನಗೊಂಡಿತು.
ಕ್ಷೇತ್ರದ ಧರ್ಮದರ್ಶಿ ಪುಂಡಲೀಕ ನಾಯಕ್ ಅವರ ಉಪಸ್ಥಿತಿಯಲ್ಲಿ ಕ್ಷೇತ್ರದ ಪ್ರಧಾನ ವೈದಿಕರಾದ ಹರಿಪ್ರಸಾದ್ ಭಟ್ ನೇತೃತ್ವದಲ್ಲಿ ಹಾಗೂ ಸಹವೈದಿಕರ ಸಹಭಾಗಿತ್ವದಲ್ಲಿ ವಿವಿಧ ಧಾರ್ಮಿಕ ಅನುಷ್ಠಾನಗಳು ಜರುಗಿದವು. ನವಕ ಪ್ರಧಾನ ಹೋಮ, ಕಲಶಾಭಿಷೇಕ, ಪಂಚಾಮೃತಾಭಿಷೇಕ, ಲಘುರುದ್ರಾಭಿಷೇಕ, ಲಘುರುದ್ರಸ್ವಾಹಾಕಾರ, ಮಹಾಪೂಜೆ, ಬಲಿ, ರಜತ ಪಲ್ಲಕ್ಕಿ ಉತ್ಸವ, ಪಲ್ಲಪೂಜೆ, ರಥೋತ್ಸವ, ಮಧ್ಯಾಹ್ನ ಮಹಾಅನ್ನಸಂತರ್ಪಣೆ ನಡೆಯಿತು.
ಮಣಿಪಾಲ ಆರ್‌ಎಸ್‌ಬಿ ಮಹಿಳಾ ವೇದಿಕೆ ಭಜನಾ ಮಂಡಳಿಯಿಂದ ಭಜನೆ, ಸಂಜೆ ನರಸಿಂಗೆ ಶ್ರೀ ನರಸಿಂಹ ಭಜನಾ ಮಂಡಳಿಯಿಂದ ಭಜನೆ, ಕಲ್ಪೋಕ್ತ ಪೂಜೆ, ರಂಗಪೂಜೆ. ಮಹಾಬಲಿ ಉತ್ಸವ, ರಥೋತ್ಸವ, ವಸಂತ ಮಂಟಪದಲ್ಲಿ ಅಷ್ಠಾವಧಾನ ಸೇವೆಗಳು ನಡೆದವು. ರಾತ್ರಿ ಪಡ್ಡಾಂ ಓಂತಿಬೆಟ್ಟು ಯಕ್ಷಾಭಿಮಾನಿ ಬಳಗದಿಂದ ಕಂಸವಧೆ ಯಕ್ಷಗಾನ, ಬಳಿಕ ಬೈಲೂರು ಚೈತನ್ಯ ಕಲಾವಿದರಿಂದ ತುಳು ನಾಟಕ ಅಷ್ಟೆಮಿ ಪ್ರದರ್ಶನಗೊಂಡಿತು.