

ಹುಬ್ಬಳ್ಳಿ: ಲಘು ಉದ್ಯೋಗ ಭಾರತೀ ಹುಬ್ಬಳ್ಳಿ- ಧಾರವಾಡ ಘಟಕವು ತನ್ನ 31ನೇ ಸ್ಥಾಪನಾ ದಿನವನ್ನು ಇಲ್ಲಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಎಂಬಿಎ ಭವನದಲ್ಲಿ ಶುಕ್ರವಾರ ಭವ್ಯವಾಗಿ ಆಚರಿಸಿತು.
ಪ್ರೇರಣಾದಾಯಕ ಭಾಷಣ, ಉಪಯುಕ್ತ ಚರ್ಚೆಗಳು ಹಾಗೂ ಉದ್ಯಮ ಕ್ಷೇತ್ರದಲ್ಲಿ ಸಾಧನೆಗೈದವರ ಮಾತುಗಳು ಹಾಗೂ ಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮಗಳು ನಡೆದವು.
ಸೇಫ್ ಹ್ಯಾಂಡ್ಸ್ ಸಂಸ್ಥೆಯ ಸಂಸ್ಥಾಪಕಿ ಶ್ರಾವಣಿ ಪವಾರ್ ಮಾತನಾಡಿ, ತಮ್ಮ ಉದ್ಯಮ ಆರಂಭ ಹಾಗೂ ನಂತರದ ಅನುಭವಗಳನ್ನು ಹಂಚಿಕೊಂಡರು. ಉದ್ಯಮದಲ್ಲಿ ದೃಢ ನಂಬಿಕೆ, ನಿರಂತರ ಪರಿಶ್ರಮ ಹಾಗೂ ಪ್ರಯತ್ನಗಳ ಮಹತ್ವವನ್ನು ಅವರು ವಿವರಿಸಿದರು.
ಆರ್ ಎಸ್ ಎಸ್ ಉತ್ತರ ಪ್ರಾಂತ ಕಾರ್ಯಕಾರಣಿ ಸದಸ್ಯ ರವೀಂದ್ರ ಜಿ. ಅವರು ಮಾತನಾಡಿ, ಪಂಚತಂತ್ರದ ಮೌಲ್ಯಗಳು ಇಂದಿನ ಜೀವನದಲ್ಲಿ ಹೇಗೆ ಅನ್ವಯಿಸುತ್ತವೆ ಎಂಬ ಬಗ್ಗೆ ತಿಳಿಸಿದರು.
ಅತಿಥಿಯಾಗಿದ್ದ ಧಾರವಾಡ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಮಂಜುನಾಥ ಹೊಸಮನಿ ಮಾತನಾಡಿ, ಕೈಗಾರಿಕೆಗಳಿಗಾಗಿ ಸರ್ಕಾರ ನೀಡುತ್ತಿರುವ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಲಘು ಉದ್ಯೋಗ ಭಾರತೀ ಕರ್ನಾಟಕದ ಉಪಾಧ್ಯಕ್ಷ ಶಿವಾನಂದ ಅವಟಿ ಮಾತನಾಡಿದರು.
ಘಟಕದ ಅಧ್ಯಕ್ಷ ರಾಜು ಪಾಟೀಲ ಅವರು, ಚಟುವಟಿಕೆಗಳ ವರದಿ ಮಂಡಿಸಿದರು. ವಿವಿಧ ಉದ್ಯಮ ಸಂಘಟನೆಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳನ್ನು ಸನ್ಮಾನಿಸಿ, ಅವರ ಅಮೂಲ್ಯ ಕೊಡುಗೆಗಳನ್ನು ಗೌರವಿಸಲಾಯಿತು.
ಘಟಕದ ಕಾರ್ಯದರ್ಶಿ ಪ್ರಸಾದ ಬಿ. ಹಾಗೂ ಕಾರ್ಯಕಾರಿಣಿ ಸದಸ್ಯರು ಭಾಗವಹಿಸಿದ್ದರು.