ಲೇಡಿಗೋಶನ್‌ನಲ್ಲಿ ದಾಖಲೆ ಸಂಖ್ಯೆಯ ಹೆರಿಗೆ

lady
Published on

ಮಂಗಳೂರು: ರಾಜ್ಯ ಹಾಗೂ ಹತ್ತಿರದ ರಾಜ್ಯಗಳ ಬಡವರಿಗೆ ಆಶ್ರಯ ನೀಡುತ್ತಾ ಬಂದಿರುವ ಮಂಗಳೂರು ಲೇಡಿಗೋಶನ್ ಆಸ್ಪತ್ರೆಯು ದಾಖಲೆ ಸಂಖ್ಯೆಯ ಹೆರಿಗೆ ಮೂಲಕ ಮತ್ತೊಮ್ಮೆ ಸುದ್ದಿಯಾಗುತ್ತಿದೆ.

ಈ ಅಕ್ಟೋಬರ್ ತಿಂಗಳೊಂದರಲ್ಲೇ ಆಸ್ಪತ್ರೆಯಲ್ಲಿ 800ಕ್ಕೂ ಅಧಿಕ ಮಹಿಳೆಯರು ಸುರಕ್ಷಿತವಾಗಿ ಮಗುವಿಗೆ ಜನ್ಮ ನೀಡಿದ್ದಾರೆ. ಇದರಲ್ಲಿ 379 ಸಿಸೇರಿಯನ್. ಉಳಿದದ್ದು ಸಹಜ ಪ್ರಸವ.

ಲೇಡಿಗೋಶನ್ ಸರ್ಕಾರಿ ಆಸ್ಪತ್ರೆಯಲ್ಲಿ ಸಾಮಾನ್ಯವಾಗಿ ಮಾಸಿಕ ಸುಮಾರು 450-500 ಹೆರಿಗೆಗಳು ಇರುತ್ತವೆ. ಆದರೆ ಸೆಪ್ಟೆಂಬರ್ ನಲ್ಲಿ 650 ಹೆರಿಗೆ ಇತ್ತು. ಈ ತಿಂಗಳು ಈ ಸಂಖ್ಯೆ ಮತ್ತಷ್ಟು ಹೆಚ್ಚಿದೆ.

ಕರೊನಾ ಆತಂಕ ಆರಂಭವಾದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಪಾಸಿಟಿವ್ ಬಂದ ಎಲ್ಲ ಗರ್ಭಿಣಿಯರನ್ನು ಚಿಕಿತ್ಸೆಗಾಗಿ ಕೋವಿಡ್ ಆಸ್ಪತ್ರೆ ಎಂದು ಗುರುತಿಸಲಾದ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಲಾಗುತ್ತಿತ್ತು. ಇದರಿಂದ ಸೋಂಕಿಗೆ ಒಳಗಾದ ಗರ್ಭಿಣಿಯರು ಹೆಚ್ಚಿನ ಆತಂಕಕ್ಕೆ ಒಳಗಾಗುತ್ತಿದ್ದರು. ಆದರೆ ಒಂದುವರೆ ತಿಂಗಳಿನಿಂದ ಲೇಡಿಗೋಶನ್ ಆಸ್ಪತ್ರೆಯಲ್ಲೇ 23 ಹಾಸಿಗೆಗಳ ಪ್ರತ್ಯೇಕ ಕೋವಿಡ್ ಬ್ಲಾಕ್ ಆರಂಭಿಸಿರುವುದು ಗರ್ಭಿಣಿಯರಿಗೆ ಹೆಚ್ಚಿನ ನಿರಾಳತೆಯನ್ನು ತಂದುಕೊಟ್ಟಿದೆ ಎನ್ನುತ್ತಾರೆ ಇಲ್ಲಿ ಸೇವೆ ಮಾಡುತ್ತಿರುವ ಓರ್ವ ದಾದಿ.

ಇತರ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸಂದರ್ಭ ಅಧಿಕ ಬಿಲ್ ಬರುತ್ತಿರುವುದು, ಕೋವಿಡ್ ಸಂಬಂಧಿಸಿ ಜಿಲ್ಲೆಯ ಸರ್ಕಾರಿ ವ್ಯವಸ್ಥೆಯ ಬಗ್ಗೆ ಜನರಿಗೆ ಹೆಚ್ಚಿನ ವಿಶ್ವಾಸ ಬಂದಿರುವುದು ಮತ್ತು ಇತ್ತೀಚಿನ ವರ್ಷಗಳಲ್ಲಿ ಆಸ್ಪತೆಯ ಮೂಲ ಸೌಕರ್ಯಗಳು ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಿರುವುದು ಈ ಅವಧಿಯಲ್ಲಿ ಆಸ್ಪತ್ರೆಯಲ್ಲಿ ಹೆರಿಗೆ ಪ್ರಮಾಣ ಅಧಿಕವಾಗಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಕಳೆದ ಕೆಲವು ದಶಕಗಳಿಂದ ದಕ್ಷಿಣ ಕನ್ನಡ ಮಾತ್ರವಲ್ಲದೆ ಉಡುಪಿ, ಕೊಡಗು, ಚಿಕ್ಕಮಗಳೂರು ಸಹಿತ ರಾಜ್ಯದ ವಿವಿಧೆಡಗಳಿಂದ ಮತ್ತು ಹತ್ತಿರದ ಕೇರಳ ರಾಜ್ಯದ ಕಣ್ಣೂರು ಜಿಲ್ಲೆ ತನಕದ ಬಡ ಹೆಣ್ಣು ಮಕ್ಕಳು ಆರೋಗ್ಯ ಸೇವೆಗಾಗಿ ಲೇಡಿಗೋಶನ್ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ.

ಆಸ್ಪತ್ರೆಯಲ್ಲಿ ಹೆಚ್ಚಿರುವ ಮೂಲ ಸೌಕರ್ಯ, ವೈದ್ಯರು, ಇತರ ವೈದ್ಯಕೀಯ ಮತ್ತು ಇತರ ಸಿಬ್ಬಂದಿಯ ಗುಣಮಟ್ಟದ ಸೇವೆಯಿಂದ ಸರ್ಕಾರಿ ಆಸ್ಪತ್ರೆಯನ್ನು ಅವಲಂಬಿಸುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಿದೆ. ಕೋವಿಡ್ ಬ್ಲಾಕ್ ತೆರೆದಿರುವುದು ಒಳ್ಳೆಯ ಫಲಿತಾಂಶ ನೀಡಿದೆ. ಹೆರಿಗೆಗಾಗಿ ಬರುವ ಹೆಣ್ಣುಮಕ್ಕಳಲ್ಲಿ ಜಿಲ್ಲೆಯವರ ಸಂಖ್ಯೆ ಹೆಚ್ಚಿದೆ ಎನ್ನುವುದು ಗಮನಾರ್ಹ. ಡಾ.ದುರ್ಗಾಪ್ರಸಾದ್ ಅಧೀಕ್ಷಕರು, ಲೇಡಿಗೋಶನ್ ಆಸ್ಪತ್ರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net