

- ಭರತ್ ಶೆಟ್ಟಿಗಾರ್, ಮಂಗಳೂರು
‘ಹೆರಿಗೆ’ ಎಂದಾಕ್ಷಣ ಕರಾವಳಿಯ ಬಡ-ಮಧ್ಯಮ ವರ್ಗದ ಜನರಿಗೆ ನೆನಪಾಗೋದು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆ. ಕರೊನಾ ವೈರಸ್ ಹಾವಳಿ ಆರಂಭವಾದ ಬಳಿಕ ಆಸ್ಪತ್ರೆಗಳೆಂದರೆ ಭಯ ಪಡುವಂತಾಗಿದೆ. ಆದರೆ ಸದ್ಯದ ಮಟ್ಟಿಗೆ ಈ ಆಸ್ಪತ್ರೆಗೆ ಬರುವ ಗರ್ಭಿಣಿಯರಿಗೆ ಯಾವುದೇ ಸಮಸ್ಯೆಯಿಲ್ಲ.
ಜಿಲ್ಲೆಯಲ್ಲಿ ಇದುವರೆಗೆ ಗರ್ಭಿಣಿಯರಿಗೆ ಕರೊನಾ ಸೋಂಕು ಪ್ರಕರಣಗಳು ವರದಿಯಾಗಿಲ್ಲ. ಕೆಮ್ಮು -ಶೀತದಂಥ ಸಮಸ್ಯೆ ಹೊರತುಪಡಿಸಿ ಬೇರಾವುದೇ ರೋಗ ಲಕ್ಷಣಗಳು ಜಿಲ್ಲೆ ಮಟ್ಟಿಗೆ ಪತ್ತೆಯಾಗಿಲ್ಲ. ಒಂದು ವೇಳೆ ಶಂಕಿತ ಪ್ರಕರಣಗಳು ಇದ್ದರೆ ಅಂಥವರನ್ನು ನೇರವಾಗಿ ವೆನ್ಲಾಕ್‌ಗೆ ದಾಖಲಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಹಾಗಾಗಿ ಲೇಡಿಗೋಷನ್ ಆಸ್ಪತ್ರೆ ಹಿಂದಿನಂತೆ ಕೆಲಸ ನಿರ್ವಹಿಸುತ್ತಿದೆ.
ಹೆಚ್ಚು ಕಟ್ಟುನಿಟ್ಟು: ಆಸ್ಪತ್ರೆಯಲ್ಲಿ ಹಿಂದಿಗಿಂತ ಹೆಚ್ಚು ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಪ್ರಸ್ತುತ ಹೊಸ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕೂಡಾ ಲಾಭವೇ ಆಗಿದೆ. ಆಸ್ಪತ್ರೆಯ ಪ್ರಧಾನ ಪ್ರವೇಶ ದ್ವಾರವನ್ನು ಮುಚ್ಚಲಾಗಿದ್ದು ಬಲ ಭಾಗದಲ್ಲಿರುವ ಹೊರ ರೋಗಿ ವಿಭಾಗ ಮೂಲಕ ಮಾತ್ರ ಪ್ರವೇಶಕ್ಕೆ ಅವಕಾಶವಿದೆ. ಗರ್ಭಿಣಿ/ಬಾಣಂತಿಯರ ಜತೆ ಒಬ್ಬರಿಗೆ ಮಾತ್ರ ಇರಲು ಅವಕಾಶವಿದ್ದು, ಹಿಂದಿನಂತೆ ನೋಡಲು ಬರುವವರಿಗೆ ಪ್ರವೇಶವಿಲ್ಲ.
ಸಿಬ್ಬಂದಿಗೆ ಆತಂಕ: ಯಾವುದೇ ಆತಂಕವಿಲ್ಲದಿದ್ದರೂ, ಲೇಡಿಗೋಷನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಭಯದಲ್ಲಿದ್ದಾರೆ. ಜಿಲ್ಲೆಯ ವಿವಿಧೆಡೆಯಿಂದ ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಬರುವುದರಿಂದ ಮಾಸ್ಕ್, ಸ್ಯಾನಿಟೈಸರ್‌ಗಳನ್ನು ಉಪಯೋಗಿಸಿದರೂ, ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಸಿಬ್ಬಂದಿ ಆತಂಕ ವ್ಯಕ್ತಪಡಿಸುತ್ತಾರೆ.
ವೆನ್ಲಾಕ್‌ನಲ್ಲಿ ಐಸೋಲೇಷನ್: ವೆನ್ಲಾಕ್ ಆಡಳಿತ ಕಟ್ಟಡದ ಎರಡನೇ ಮಹಡಿಯಲ್ಲಿ ಒಂದು ಬ್ಲಾಕ್‌ನಲ್ಲಿ ಐಸೋಲೇಷನ್ ವಾರ್ಡ್ ಸಿದ್ಧವಾಗುತ್ತಿದೆ. ನಾಲ್ಕು ಶಂಕಿತರಿಗೆ ಮತ್ತು 2 ಪಾಸಿಟಿವ್ ಪ್ರಕರಣಗಳಿಗೆ ಸಂಬಂಧಿಸಿದ ಬೆಡ್‌ಗಳಿಗೆ ಅವಕಾಶವಿದೆ. ಜತೆಗೆ ನಾಲ್ವರು ನರ್ಸ್ ಹಾಗೂ ತಜ್ಞ ವೈದ್ಯರನ್ನೂ ನಿಯೋಜಿಸಲಾಗುತ್ತದೆ. ಸಾಮಾನ್ಯ ಹೆರಿಗೆ/ಅಥವಾ ಸಿಸೇರಿಯನ್‌ಗೂ ವ್ಯವಸ್ಥೆ ಮಾಡುತ್ತಿದ್ದು, ಹೆರಿಗೆಗೆ ಆಪರೇಶನ್ ಥಿಯೇಟರ್ ಕೂಡ ಇದೆ.
ಕಾಸರಗೋಡಿನವರು ಇಲ್ಲ: ಲೇಡಿಗೋಷನ್‌ಗೆ ದಕ್ಷಿಣ ಕನ್ನಡ ಜಿಲ್ಲೆಯವರು ಮಾತ್ರವಲ್ಲದೆ, ಉಡುಪಿ, ಕಾಸರಗೋಡು, ಮಲೆನಾಡು ಭಾಗದಿಂದಲೂ ಹೆರಿಗೆ ಹಾಗೂ ಗರ್ಭಕೋಶಕ್ಕೆ ಸಂಬಂಧಿತ ರೋಗಗಳ ಚಿಕಿತ್ಸೆಗೆ ಮಹಿಳೆಯರು ಬರುತ್ತಾರೆ. ಕಾಸರಗೋಡಿಗೆ ಹೊಂದಿಕೊಂಡಂತಿರುವ ಜಿಲ್ಲೆಯ ಗಡಿಗಳು ಬಂದ್ ಆಗಿರುವುದರಿಂದ ಪ್ರಸ್ತುತ ಕಾಸರಗೋಡಿನಿಂದ ಯಾರೂ ಬರುತ್ತಿಲ್ಲ. ಈ ಹಿಂದೆ ಹೆರಿಗೆಗಾಗಿ ಬಂದಿದ್ದ ಗರ್ಭಿಣಿಯವರು ಈಗಾಗಲೇ ತೆರಳಿದ್ದಾರೆ. ಕಾಸರಗೋಡಿನ ಕಡೆಯವರಿಗೆ ಅವಕಾಶ ಇಲ್ಲದಿರುವುದು ಲೇಡಿಗೋಷನ್‌ನ ಆತಂಕವನ್ನು ಕಡಿಮೆ ಮಾಡಿದೆ. ಸದ್ಯ ಅಲ್ಲಿ ದಾಖಲಾತಿ ಪ್ರಮಾಣವೂ ಕಡಿಮೆಯಾಗಿದೆ.
ಲೇಡಿಗೋಷನ್‌ನಲ್ಲಿ ಕರೊನಾ ವೈರಸ್ ಕುರಿತಂತೆ ಆತಂಕ ಪಡುವಂತಿಲ್ಲ. ಗರ್ಭಿಣಿಯರಿಗೆ ಕರೊನಾ ಹರಡಿರುವ ಯಾವುದೇ ಪ್ರಕರಣಗಳು ಜಿಲ್ಲೆಯಲ್ಲಿ ಈ ವರೆಗೆ ಪತ್ತೆಯಾಗಿಲ್ಲ. ಒಂದು ವೇಳೆ ಅಂಥ ಲಕ್ಷಣಗಳಿರುವ ಗರ್ಭಿಣಿಯರಿದ್ದರೂ ಅವರನ್ನು ನೇರವಾಗಿ ವೆನ್ಲಾಕ್‌ಗೆ ದಾಖಲಿಸಲಾಗುತ್ತದೆ.
ಡಾ.ಸವಿತಾ, ಲೇಡಿಗೋಷನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ