ಸಾಲಗಾರರ ಕಿರುಕುಳ ತಾಳಲಾರದೆ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ತಾಯಿ

crime
Published on

ಮಂಗಳೂರು: ಬೆಂಗಳೂರಿನ ಮಲ್ಲೇಶ್ವರಂನ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೂಳೂರು ಬಳಿ ಮಂಗಳವಾರ ನಡೆದಿದೆ.


ಮಹಿಳೆ ಪುತ್ರ ಹಾಗೂ ಪುತ್ರಿಯ ಜತೆ ಬೆಂಗಳೂರಿನಿಂದ ಮನೆ ಬಿಟ್ಟು ಮಂಗಳೂರಿಗೆ ಬಂದಿದ್ದಾರೆ. ಮಹಿಳೆಯ ಪತಿ ಎರಡು ತಿಂಗಳ ಹಿಂದೆ ಮೃತಪಟ್ಟಿದ್ದರು. ಸಾಕಷ್ಟು ಸಾಲ ಮಾಡಿಕೊಂಡಿದ್ದರಿಂದ ಸಾಲ ಕೊಟ್ಟವರು ವಾಪಸ್ ಕೊಡುವಂತೆ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತ ಮಹಿಳೆ ಮಕ್ಕಳನ್ನು ಕರೆದುಕೊಂಡು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪಣಂಬೂರು ಕಡಲ ಕಿನಾರೆಗೆ ಬಂದಿದ್ದರು. ಆದರೆ ಅಲ್ಲಿ ರಕ್ಷಣಾ ಸಿಬ್ಬಂದಿಗಳಿದ್ದುದರಿಂದ ಹಿಂತಿರುಗಿ ಬಂದು ಕೂಳೂರು ಸೇತುವೆಯಿಂದ ಹಾರಲು ಯತ್ನ ನಡೆಸಿದ್ದರು. ಸಾರ್ವಜನಿಕರು ಇದ್ದುದರಿಂದ ಇದೂ ಸಾಧ್ಯವಾಗದೆ ವಿಷ ಸೇವನೆ ಮಾಡಿದ್ದರು. ತಕ್ಷಣ ಸಾರ್ವಜನಿಕರು ಕಾವೂರು ಪೊಲೀಸರಿಗೆ ಮಾಹಿತಿ ನೀಡಿ ಅವರು ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್‌ಚಾರ್ಜ್ ಆಗಿ ಸಂಬಂಧಿಕರ ಮನೆಗೆ ತೆರಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net