

ಮಂಡ್ಯ: ತನ್ನ 3 ಮಕ್ಕಳಿಗೆ ತನ್ನ ಕೈಯಾರೆ ವಿಷ ಉಣಿಸಿ ತಾಯಿಯೊಬ್ಬಳು ತಾನೂ ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ನಡೆದಿದೆ.
ಉಸ್ನಾ ಕೌಸರ್ (30) ಎಂಬಾಕೆಯೇ ತನ್ನ ಮೂರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಮಹಿಳೆ. ಮದ್ದೂರಿನ ಹೊಳೆಬೀದಿಯಲ್ಲಿ ವಾಸವಿದ್ದ ಉಸ್ನಾ ಕೌಸರ್ ತನ್ನ ಮಕ್ಕಳಾದ ಹ್ಯಾರಿಸ್ (7), ಆಲಿಸಾ (4) ಮತ್ತು ಅನಮ್ ಫಾತಿಮಾ (2) ಎಂಬ ಪುಟ್ಟ ಮಕ್ಕಳನ್ನು ಕೊಂದು ತಾನೂ ಪ್ರಾಣ ಬಿಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೌಟುಂಬಿಕ ಜಗಳವೇ ಈ ಘಟನೆಗೆ ಕಾರಣ ಎಂದು ಹೇಳಲಾಗಿದೆ. ಮೊದಲು ಮಕ್ಕಳಿಗೆ ವಿಷ ನೀಡಿರುವ ಉಸ್ನಾ ಕೌಸರ್ ತನ್ನ ಕಣ್ಣೆದುರೇ ಮಕ್ಕಳು ಮೃತಪಟ್ಟ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳಕ್ಕೆ ಮದ್ದೂರು ಟೌನ್ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ಬಳಿಕ ತಾಲೂಕು ಆಸ್ಪತ್ರೆಯ ಶವಗಾರಕ್ಕೆ ಮೃತದೇಹಗಳನ್ನು ರವಾನೆ ಮಾಡಲಾಗಿದೆ.