

ಕೊಪ್ಪಳ:ರೈತ ಮಹಿಳೆಯರು ಕೃಷಿ ಕೇವಲ ಉದ್ಯೋಗ ಎಂದು ತಿಳಿಯದೇ ಉದ್ಯಮ ಎಂದು ತಿಳಿದುಕೊಂಡಲ್ಲಿ ಲಾಭದಾಯಕವಾಗಿಸಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ವಿಸ್ತರಣಾ ಮುಂದಾಳು ಡಾ.ಎಂ.ವಿ.ರವಿ ಹೇಳಿದರು.
ನಗರದ ಕೆವಿಕೆ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹಿಳಾ ಕಿಸಾನ್ ದಿವಸ್ ಹಾಗೂ ವಿಶ್ವ ಆಹಾರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ಕೃಷಿಯಲ್ಲಿ ಮಹಿಳೆಯರೇ ಮೇಲಗೈ ಸಾಧಿಸುತ್ತಿದ್ದಾರೆ. ಕೇವಲ ಉತ್ಪನ್ನ ಬೆಳೆಯದೆ, ಸಂಸ್ಕರಣೆ ವಿಧಾನ ಅರಿತಲ್ಲಿ ಕೃಷಿಯನ್ನು ಲಾಭದಾಯಕವಾಗಿಸಬಹುದು.
ಉಪ ಕಸುಬುಗಳಾದ ಹೈನುಗಾರಿಕೆ, ಆಡು, ಕುರಿ, ಕೋಳಿ, ಜೇನು ಸಾಕಣೆ ಮಾಡಬಹುದು. ಇವು ರೈತ ಮಹಿಳೆಯರಿಗೆ ಹೆಚ್ಚು ಸೂಕ್ತ. ಉದ್ಯಮಿಗಳಾಗಿ ಸ್ವಾವಲಂಬನೆ ಪಡೆಯಬಹುದಲ್ಲದೇ ಗುಳೆ ತಪ್ಪಿಸಬಹುದು ಎಂದರು.
ಅರಣ್ಯ ಅಧಿಕಾರಿ ಡಾ.ಚಂದ್ರಣ್ಣ ಮಾತನಾಡಿ, ಮಹಿಳೆಯರು ಎಲ್ಲ ರಂಗದಲ್ಲಿ ಸಾಧನೆ ಮಾಡುತ್ತಿದ್ದಾರೆ. ನಮ್ಮನ್ನೆಲ್ಲ ಸಲಹಿ, ಯೋಗ್ಯರನ್ನಾಗಿ ಮಾಡುವುದು ತಾಯಿ. ತಾಯಿ ಪ್ರೀತಿ ಅತಿ ಮಹತ್ವದ್ದಾಗಿದೆ.
ಕೃಷಿಗೆ ಅವಶ್ಯ ಸಸಿಗಳನ್ನು ನಮ್ಮ ಇಲಾಖೆಯಿಂದ ಪಡೆಯಬಹುದು. ಮಿಶ್ರ ಬೆಳೆ ಬೆಳೆದಲ್ಲಿ ಹೆಚ್ಚಿನ ಲಾಭ ಗಳಿಸಬಹುದು ಎಂದು ಅಭಿಪ್ರಾಯ ಪಟ್ಟರು.
ಸಾಧಕ ರೈತ ಮಹಿಳೆಯರಾದ ವಿಶಾಲಾಕ್ಷಮ್ಮ, ಯಲ್ಲಮ್ಮ, ನಾಗರತ್ನಾ ಅವರನ್ನು ಸನ್ಮಾನಿಸಲಾಯಿತು. ಆತ್ಮ ಯೋಜನೆ ಸಂಚಾಲಕ ಶಿವಪ್ಪ ನಾಯಕ್ ಇತರರಿದ್ದರು.