

ಕಾರವಾರ: ಇಲ್ಲಿನ ಮಹಿಳಾ ಕಾಲೇಜ್ ಹೊಸ ಕಟ್ಟಡವನ್ನು ಉದ್ಘಾಟನೆ ಮಾಡದೇ ತರಗತಿ ಪ್ರಾರಂಭಿಸಿರುವುದಕ್ಕೆ ಶಾಸಕ ಸತೀಶ ಸೈಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಕಾಲೇಜ್ ಹೊಸ ಕಟ್ಟಡಕ್ಕೆ ಭೇಟಿ ನೀಡಿದ ಶಾಸಕ ಸತೀಶ ಸೈಲ್ ಅಲ್ಲಿ ತರಗತಿ ನಡೆಯುತ್ತಿರುವುದನ್ನು ನೋಡಿ ಕೆಂಡಾಮಂಡಲರಾದರು. ಉದ್ಘಾಟನೆ ಮಾಡದೇ ತರಗತಿ ಪ್ರಾರಂಭಿಸಿದ್ದಕ್ಕೆ ಉಪನ್ಯಾಸಕರನ್ನು ತರಾಟೆಗೆ ತೆಗೆದುಕೊಂಡರು.
ಶಿಷ್ಟಾಚಾರ ಉಲ್ಲಂಘನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಽಕಾರಿ ಕೆ.ಲಕ್ಷ್ಮೀಪ್ರಿಯಾ ಅವರಿಗೆ ಕರೆ ಮಾಡಿ ಸೂಚನೆ ನೀಡಿದರು. 2 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಬೇಕು. ಸ್ಥಳೀಯ ಶಾಸಕರಾದರೂ ಉದ್ಘಾಟಿಸಬೇಕು. ಆದರೆ, ಯಾರ ಗಮನಕ್ಕೂ ತಾರದೇ ತರಗತಿ ಪ್ರಾರಂಭಿಸಿರುವುದು ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದೂರಿದರು.
ಕುಂಠಿ ಮಹಾಮಾಯಾ ದೇವಸ್ಥಾನದ ಬಳಿ ಶಿಕ್ಷಣ ಇಲಾಖೆ ಸಣ್ಣ ಕಟ್ಟಡದಲ್ಲಿ ಕಳೆದ ಹಲವು ವರ್ಷಗಳಿಂದ ಸರ್ಕಾರಿ ಮಹಿಳಾ ಕಾಲೇಜ್ ನಡೆಯುತ್ತಿತ್ತು. 8 ವರ್ಷಗಳ ಹಿಂದೆ ಕಾಲೇಜ್ ನಿರ್ಮಾಣಕ್ಕೆ 3 ಕೋಟಿ ರೂ. ಹಣ ಮಂಜೂರಾಗಿತ್ತು. ಸರ್ಕಾರಿ ಡಿಪ್ಲೊಮಾ ಕಾಲೇಜ್ ಜಾಗದಲ್ಲಿ ಮಹಿಳಾ ಕಾಲೇಜ್ ಕಟ್ಟಡ ನಿರ್ಮಾಣ ಕಾಮಗಾರಿ 5 ವರ್ಷಗಳ ಹಿಂದೆ ಪ್ರಾರಂಭವಾಗಿತ್ತು. ಕಾಲೇಜ್ ಪ್ರಾಂಶುಪಾಲ ವಿ.ಎಂ.ನಾಯ್ಕ ಅವರು ಏ.30 ರಂದು ನಿವೃತ್ತರಾಗುತ್ತಿದ್ದು, ಅದಕ್ಕೂ ಮುಂಚೆ ತರಗತಿ ಪ್ರಾರಂಭಿಸಬೇಕು ಎಂಬ ಕಾರಣಕ್ಕೆ ಸೋಮವಾರ ಹೊಸ ಕಟ್ಟಡದಲ್ಲಿ ತರಗತಿ ಪ್ರಾರಂಭಿಸಲಾಗಿದೆ ಎಂಬುದು ಶಾಸಕ ಸತೀಶ ಸೈಲ್ ದೂರು.