

ಮಂಗಳೂರು: ಮಹಿಳೆಯರು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಬಲಿಷ್ಠರಾಗುತ್ತಿದ್ದು, ಅವರಿಗೆ ಪ್ರತಿಯೊಬ್ಬರೂ ಗೌರವ ನೀಡಬೇಕು ಎಂದು ಜಿ.ಪಂ. ಸಿಇಒ ಡಾ.ಕುಮಾರ್ ಹೇಳಿದರು.
ಅಂತಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬುಧವಾರ ಕರಾವಳಿ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಮಹಿಳಾ ಕ್ರೀಡಾಕೂಟ ಉದ್ಘಾಟಿಸಿ, ಅವರು ಮಾತನಾಡಿದರು. ದೇಶದಲ್ಲಿ ಮಹಿಳೆಯರ ಸಾಧನೆ ಸ್ಪೂರ್ತಿಯಾಗಿವೆ. ಕ್ರೀಡಾಕೂಟಗಳಲ್ಲಿ ಅದರಲ್ಲೂ ಕ್ರಿಕೆಟ್‌ನಲ್ಲೂ ಮಹಿಳೆಯರು ಮೇಲುಗೈ ಸಾಧಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದವರು ಹೇಳಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿಸೋಜ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷೆ ಲಿಲ್ಲಿ ಪಾಯಸ್, ಲಿಫ್ಟಿಂಗ್ ತರಬೇತುದಾರರಾದ ಸರಸ್ವತಿ ಪುತ್ರನ್, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ನಾಯಕ್, ನೋಡೆಲ್ ಅಧಿಕಾರಿ ವಿನೋದ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
19 ವರ್ಷದೊಳಗಿನ ಯುವತಿಯರಿಗೆ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಒಟ್ಟು 6 ತಂಡಗಳು ಭಾಗವಹಿಸಿದ್ದವು. ಸೈಂಟ್ ಫಿಲೋಮಿನಾ ಕಾಲೇಜು ಪ್ರಥಮ, ರೋಜಾಮಿಸ್ತಿಕಾ ಕಿನ್ನಿಕಂಬಳ ದ್ವಿತೀಯ ಹಾಗೂ ಅತ್ತಾವರ ಸರ್ಕಾರಿ ಹೈಸ್ಕೂಲ್ ತಂಡ ತೃತೀಯ ಸ್ಥಾನ ಗಳಿಸಿದವು.