

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸ್ವ ಕ್ಷೇತ್ರದಲ್ಲೇ ಕಾಣುವುದಿಲ್ಲ. ಇವರು ಅಧಿಕಾರಕ್ಕೆ ಬಂದಾಗಿನಿಂದ ಜಿಲ್ಲೆಗೆ ಒಂದು ರೂಪಾಯಿ ಅನುದಾನ ಸಹ ತಂದಿಲ್ಲ ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಟೀಕಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲು, ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿದ್ದು, ವಿದ್ಯುತ್ ದರ ಏರಿಸಿದ್ದು ಕಾಂಗ್ರೆಸ್ ಅಲ್ವೆ? ಎಂದು ಪ್ರಶ್ನಿಸಿದ ಬೆಲ್ಲದ, ಮಾತು ಮಾತಿಗೂ ಲಾಡ್ ಅವರು ಪ್ರಧಾನಿ ಮೋದಿ ಹೆಸರು ಎಳೆದು ತರುತ್ತಾರೆ. ಇದು ಅವರಿಗೆ ಸರಿ ತರುವಂತದ್ದಲ್ಲ. ಮೋದಿ ಹೆಸರು ಹೇಳಿದರೆ ತಾವು ದೊಡ್ಡವರಾಗುತ್ತಾರೆ ಎಂದು ತಿಳಿದಿದ್ದಾರೆ. ಜನ ಧಾರವಾಡಕ್ಕೆ ಏನು ಮಾಡಿದ್ದೀರಿ ಎಂದು ಕೇಳುತ್ತಿದ್ದಾರೆ. ಇದಕ್ಕೆ ಉತ್ತರಿಸಲಿ ಎಂದರು.
ಮಹಾನಗರ ಪಾಲಿಕೆ ನೌಕರರ ಸುಮಾರು 25 ಕೋಟಿ ರೂ. ಸಂಬಳ ಬರಬೇಕಿದೆ. ಅದು ಇನ್ನೂ ಬಂದಿಲ್ಲ. 120 ಕೋಟಿ ರೂ. ರಾಜ್ಯ ಸರ್ಕಾರದಿಂದ ಪಾಲಿಕೆ ಅನುದಾನ ಬರಬೇಕಿದೆ. ಮೊದಲು ಅದನ್ನು ಕೊಡಿಸಲಿ. ಲಾಡ್ ಅವರು ಮೊದಲು ನಮ್ಮ ಜಿಲ್ಲೆಗೆ ಮಾಡಬೇಕಾಗಿರುವ ಕೆಲಸ ಮಾಡಲಿ. ಅದನ್ನು ಬಿಟ್ಟು ಮೋದಿ ಅವರನ್ನು ಆರೋಪಿಸುತ್ತಿದ್ದಾರೆ. ಬೆಲೆ ಏರಿಕೆಯಿಂದ ಜನ ರೋಸಿ ಹೋಗಿದ್ದಾರೆ. ಹೀಗಾಗಿ ನಾವು ಜನಾಕ್ರೋಶ ಯಾತ್ರೆ ಮಾಡುತ್ತಿದ್ದೇವೆ ಎಂದು ತಿರುಗೇಟು ನೀಡಿದರು.
ನಾನು ಬಿಜೆಪಿ ರಾಜ್ಯಾಧ್ಯಕ್ಷನಾಗಲು ದೆಹಲಿಗೆ ಹೋಗಿದ್ದೆ ಎಂಬುದು ಸುಳ್ಳು ವದಂತಿ. ಖಾಸಗಿ ಕೆಲಸದ ಮೇಲೆ ನಾನು ದೆಹಲಿಗೆ ಹೋಗಿದ್ದೆ. ಅಲ್ಲಿ ಯಾವುದೇ ರಾಜಕೀಯ ವಿಚಾರ ಮಾತನಾಡಿಲ್ಲ. ಪಕ್ಷ ನೀಡಿರುವ ಈಗಿನ ಜವಾಬ್ದಾರಿಯಲ್ಲೇ ಸಂತೋಷವಾಗಿದ್ದೇನೆ ಎಂದರು.