ಲಾಕ್‌ಡೌನ್ ಪ್ರಸ್ತಾಪ ಸರ್ಕಾರದ ಮುಂದಿಲ್ಲ ; ಸಿದ್ಧಗಂಗಾ ಮಠದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ

DSC_9727
Published on

ತುಮಕೂರು : ರಾಜ್ಯದಲ್ಲಿ ಕರೊನಾ ನಿಯಂತ್ರಣಕ್ಕೆ ಕಟ್ಟೆಚ್ಚರ ವಹಿಸಲಾಗಿದೆ. ರಾಜ್ಯದ ಗಡಿ ಭಾಗದಲ್ಲಿ ತೀವ್ರ ತಪಾಸಣೆಗೆ ಸೂಚಿಸಲಾಗಿದ್ದು, ಲಾಕ್‌ಡೌನ್ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದರು.

ಶ್ರೀ ಸಿದ್ಧಗಂಗಾ ಮಠದಲ್ಲಿ ಸೋಮವಾರ ವೀರಶೈವ ಲಿಂಗಾಯತ ಮಹಾ ವೇದಿಕೆ ಹಮ್ಮಿಕೊಂಡಿದ್ದ ಡಾ.ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಗೆ ದ್ವಿತೀಯ ವರ್ಷದ ಲಕ್ಷ ಪುಷ್ಪ ಬಿಲ್ವಾರ್ಚನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುದ್ದಿಗಾರರ ಜತೆ ಮಾತನಾಡಿದರು.

ಕರೊನಾ ರಾಜ್ಯದ ಅಲ್ಲಲ್ಲಿ ಕಂಡು ಬರುತ್ತಿದ್ದು, ಮುಂಜಾಗ್ರತೆ ಕ್ರಮವಾಗಿ ಎಲ್ಲೆಡೆಯೂ ಕಟ್ಟೆಚ್ಚರ ವಹಿಸಲಾಗಿದೆ. ಕಂಟೇನ್ಮೆಂಟ್ ವಲಯಗಳನ್ನು ಮಾಡಿ ಸಂಪರ್ಕಿತರ ಪರೀಕ್ಷೆ ಮಾಡಲಾಗುತ್ತಿದೆ, ರೋಗ ಲಕ್ಷಣ ಕಂಡುಬಂದರೆ ಕ್ವಾರಂಟೈನ್‌ಗೆ ಒಳಪಡಿಸಿ ಚಿಕಿತ್ಸೆ ನೀಡಲಾಗುವುದು. ಇತ್ತೀಚೆಗೆ ಸೋಂಕು ಪತ್ತೆಯಾದ ಕೆಲವು ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿದೆ, ವರದಿ ಬಂದಾಗ ಸತ್ಯ ತಿಳಿಯಲಿದೆ ಎಂದರು.

ರಾಜ್ಯದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಹೊರ ರಾಜ್ಯ, ದೇಶದಿಂದ ಬರುವ ಪ್ರತಿಯೊಬ್ಬ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ, ನೆಗೆಟಿವ್ ವರದಿ ಬಂದರಷ್ಟೇ ನಗರ ಪ್ರವೇಶಕ್ಕೆ ಅವಕಾಶ, ಮುಖ್ಯವಾಗಿ ಕೇರಳದಿಂದ ರಾಜ್ಯಕ್ಕೆ ಬರುವವರ ಮೇಲೆ ಹೆಚ್ಚಿನ ನಿಗಾವಹಿಸಲಾಗಿದೆ. ಎಲ್ಲ ಜಿಲ್ಲಾಡಳಿತಗಳಿಗೂ ಮಾರ್ಗಸೂಚಿ ತಿಳಿಸಲಾಗಿದೆ ಎಂದರು.

ರೂಪಾಂತರ ವೈರಸ್ ಬಗ್ಗೆ ಪ್ರಧಾನಿ ಹಾಗೂ ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ನಿರ್ದೇಶನ ಪಾಲಿಸಲಾಗುವುದು, ಪ್ರಸ್ತುತ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆಯೂ ಸರ್ಕಾರ ನಿಗಾವಹಿಸಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುವಲ್ಲಿ ಕರೊನಾ ನಿಯಮಗಳನ್ನು ಪಾಲಿಸುವಂತೆ ಸೂಚನೆಗಳನ್ನು ಎಲ್ಲೆಡೆಯೂ ನೀಡಲಾಗಿದೆ ಎಂದರು.

ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ವೀರಶೈವ ಲಿಂಗಾಯತ ಮಹಾವೇದಿಕೆ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರ್ ಮತ್ತಿತರರು ಸಿಎಂ ಜತೆಗಿದ್ದರು.

ಬೆಳೆ ಹಾನಿ ಪರಿಹಾರಕ್ಕೆ ಕೇಂದ್ರಕ್ಕೆ ಪತ್ರ : ರಾಜ್ಯದಲ್ಲಿ ಅನಿರೀಕ್ಷಿತ ಮಳೆಯಿಂದಾಗಿ ಸಾಕಷ್ಟು ಭಾಗದಲ್ಲಿ ರೈತರ ಬೆಳೆ ಹಾಳಾಗಿರುವ ಬಗ್ಗೆ ಜಿಲ್ಲಾಧಿಕಾರಿಗಳಿಂದ ವರದಿ ಪಡೆಯಲಾಗಿದೆ. 685 ಕೋಟಿ ರೂ. ಜಿಲ್ಲಾಧಿಕಾರಿಗಳ ಖಾತೆಯಲ್ಲಿದ್ದು ತುರ್ತು ಸಂದರ್ಭದಲ್ಲಿ ಬಳಸಲು ಸೂಚಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಬೆಳೆಹಾನಿಗೆ ಹೆಚ್ಚು ಪರಿಹಾರ ನೀಡುವ ನಿಟ್ಟಿನಲ್ಲಿ ಕೇಂದ್ರದಿಂದ ಸಹಕಾರ ಕೋರಿ ಪತ್ರ ಬರೆಯಲಾಗಿದೆ, ಶೀಘ್ರದಲ್ಲಿಯೇ ಕೇಂದ್ರದ ತಜ್ಞರ ತಂಡ ಸಮೀಕ್ಷೆ ಕೈಗೊಳ್ಳಲು ರಾಜ್ಯಕ್ಕೆ ಆಗಮಿಸಲಿದೆ, ವರದಿ ನೀಡಿದ ನಂತರ ಸೂಕ್ತ ಪರಿಹಾರ ಲಭ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಕೂಡ ಪರಿಹಾರ ಆ್ಯಪ್ ಮೂಲಕ ಹಾನಿ ಪ್ರಮಾಣ ದಾಖಲಿಸಲಾಗಿದ್ದು, ಪರಿಹಾರ ವಿತರಿಸಲಾಗುತ್ತಿದೆ ಎಂದರು.

ನಡೆದಾಡುವ ದೇವರು ಡಾ.ಶಿವಕುಮಾರ ಸ್ವಾಮೀಜಿ ಅವರ ಕಾಲದಲ್ಲಿ ನಾವು ಇದ್ದೆವು ಎಂಬುದೇ ನಮ್ಮ ಪುಣ್ಯ, ಅವರು ನಡೆದ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು. ಶ್ರೀಗಳ ಪುಣ್ಯಸ್ಮರಣೆ ದಿನವನ್ನು ದಾಸೋಹ ದಿನ ಎಂದು ಘೋಷಿಸಲಾಗಿದ್ದು, ಕಾರ್ಯಕ್ರಮದ ರೂಪುರೇಷೆ ಬಗ್ಗೆ ಸಿದ್ದಲಿಂಗ ಸ್ವಾಮೀಜಿ ಜತೆ ಚರ್ಚಿಸಿ ತೀರ್ಮಾನಿಸಲಾಗುವುದು. ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net