ಮಳೆಯ ಅಭಾವ, ಬಿತ್ತನೆ ಕುಂಠಿತಗೊಂಡು ಕೃಷಿಯಲ್ಲಿ ಹಿನ್ನಡೆ

IMG-20250526-WA0173.jpg
Published on

ಚಿಕ್ಕಬಳ್ಳಾಪುರ: ಮುಂಗಾರು ಪೂರ್ವ ಹಾಗೂ ಪ್ರಾರಂಭದಲ್ಲಿ ಉತ್ತಮವಾಗಿ ಸುರಿದಿದ್ದ ಮಳೆಯು ಬಿತ್ತನೆಯ ಬಳಿಕ ಕೈ ಕೊಟ್ಟಿದ್ದು ಕೃಷಿಕರಲ್ಲಿ ಆತಂಕ ಮೂಡಿದೆ.
ಹೌದು! ಕಳೆದ ೧೫ ದಿನಗಳಿಂದಲೂ ಜಿಲ್ಲೆಯಲ್ಲಿ ಮೋಡ ಮುಸುಕಿದ ತಂಪು ವಾತಾವರಣ ಹೆಚ್ಚಿನ ಅವಧಿ ಕಂಡು ಬಂದರೂ ಮಳೆ ಸುರಿಯುತ್ತಿಲ್ಲ. ಬಿತ್ತನೆಯ ಪ್ರಮಾಣವು ಹೆಚ್ಚಾಗಲು ಜುಲೈ, ಆಗಸ್ಟ್‌ ನಲ್ಲಿ ನಿರೀಕ್ಷೆಗೆ ಅನುಗುಣವಾಗಿ ಬೀಳಬೇಕು. ಇಲ್ಲದಿದ್ದಲ್ಲಿ ಕೃಷಿಯಲ್ಲಿ ಹಿನ್ನಡೆ ಅನುಭವಿಸಬೇಕಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಅವಧಿಯಲ್ಲಿ ೧,೩೨,೭೯೬ ಹೆಕ್ಟೇರ್‌ನಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. ಇಲ್ಲಿಯವರೆಗೂ ಕೇವಲ ೩,೫೭೮ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಶೇ.೨.೨೬ ರಷ್ಟು ಸಾಧನೆಯಾಗಿದೆ. ಈ ಹಿಂದಿನ ವರ್ಷಗಳಲ್ಲಿ ಈ ಅವಧಿಗೆ ಕನಿಷ್ಠ ಶೇ.೨೦ ರಷ್ಟು ಪ್ರಗತಿಯಾದರೂ ಕಂಡು ಬರುತ್ತಿತ್ತು. ಆದರೆ, ಈ ಬಾರಿ ನಿರಾಶದಾಯಕವಾಗಿದೆ.
ಹವಾಮಾನ ಇಲಾಖೆಯು ಈಗಾಗಲೇ ಪ್ರಸಕ್ತ ಸಾಲಿನಲ್ಲಿ ವಾಡಿಕೆ ಪ್ರಮಾಣಕ್ಕಿಂತಲೂ ಹೆಚ್ಚಿನ ಮಳೆ ಸುರಿಯುವುದರ ಬಗ್ಗೆ ವರದಿ ನೀಡಿದೆ. ಇದರಿಂದ ಕೃಷಿ ಚಟುವಟಿಕೆಯು ಹಿಂದಿನ ವರ್ಷಗಳಿಂತಲೂ ಬಿರುಸಾಗಿರುತ್ತದೆ ಎಂಬ ಲೆಕ್ಕಾಚಾರ ಇದೆ. 

*ಏರುಗತಿಯ ನಿರೀಕ್ಷೆ*
ಮುಂಗಾರು ಪ್ರಾರಂಭದ ಮೇನಲ್ಲಿ ೬೫.೩ ಮಿ.ಮೀ ವಾಡಿಕೆ ಮಳೆಗೆ ೧೪೨.೬ ಮಿ.ಮೀ ಮಳೆ ಸುರಿದಿದೆ. ಜೂನ್‌ ನಲ್ಲಿ ೬೪.೧ ಮಿ.ಮೀ ವಾಡಿಕೆ ಮಳೆಗೆ ೪೬.೭ ಮಿ.ಮೀ ಬಿದ್ದಿದೆ.  ಜುಲೈನಲ್ಲಿ ೭೫ ಮಿ.ಮೀ ವಾಡಿಕೆ ಮಳೆಯ ನಿರೀಕ್ಷೆ ಹೊಂದಿದ್ದು ಆಗಸ್ಟ್‌ ರವರೆಗೆ ಉತ್ತಮ ಮಳೆಯಾಗದಿದ್ದಲ್ಲಿ ಬಿತ್ತನೆ ಹಾಗೂ ಇಳುವರಿ ಸಾಧನೆಯಲ್ಲಿ ಹಿನ್ನಡೆ ಅನುಭವಿಸಬೇಕಾಗುತ್ತದೆ ಎಂದೇಳಲಾಗುತ್ತದೆ. ಆದರೆ, ಈ ಅವಧಿಯಲ್ಲಿ ಉತ್ತಮ ಮಳೆಯ ನಿರೀಕ್ಷೆ ಇದ್ದು ಬಿತ್ತನೆ ಚಟುವಟಿಕೆ ಪ್ರಮಾಣವು ಏರಿಕೆಯಾಗುವ ನಿರೀಕ್ಷೆಯನ್ನು ಹೊಂದಲಾಗಿದೆ.

*ಎರಡು ತಿಂಗಳಲ್ಲಿ ನಿರೀಕ್ಷೆ*
ಅಂತರ್ಜಲ ಮಟ್ಟ ಕುಸಿತ, ಕೊಳವೆ ಬಾವಿ ವೈಪಲ್ಯ, ಮಳೆಯ ಕೊರತೆ ಸೇರಿದಂತೆ ನಾನಾ ಸಮಸ್ಯೆಗಳನ್ನು ಅನುಭವಿಸುತ್ತಿರುವ ಈ ಭಾಗದಲ್ಲಿ ರೈತರ ಪರಿಶ್ರಮದಿಂದ ಗುಣಮಟ್ಟದ ಕೃಷಿ ಉತ್ಪನ್ನಗಳನ್ನು ಬೆಳೆಯಲಾಗುತ್ತಿದೆ. ಆದರೆ, ಮಾರುಕಟ್ಟೆ ಹಾಗೂ ಬೆಲೆಯ ಸಮಸ್ಯೆ, ಆಗಾಗ ಕಾಡುವ ಹವಾಮಾನ ವೈಪರೀತ್ಯದಿಂದ ಪ್ರಗತಿಪರ ಕೃಷಿಕರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಲೇ ಇದ್ದಾರೆ.
ಮುಂಗಾರು ಅವಧಿಗೆ ಏಕದಳ ಧಾನ್ಯ ೧,೦೪,೨೬೬,  ದ್ವಿದಳ ಧಾನ್ಯ ೮,೧೦೦, ಎಣ್ಣೆಕಾಳುಗಳು ೨೦,೨೩೦ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯುತ್ತಿದ್ದು ಈಗ ಪ್ರಮುಖವಾಗಿ ನೆಲಗಡಲೆ, ತೊಗರಿಗೆ ಮಳೆಯ ಅಭಾವ ಕಾಡುತ್ತಿದೆ. ಆಗಸ್ಟ್‌ ಅಂತ್ಯದವರೆಗೆ ಬಿತ್ತನೆಯಾಗದಿದ್ದಲ್ಲಿ ಒಳ್ಳೆಯ ಇಳುವರಿಯನ್ನು ಕಾಣಲು ಸಾಧ್ಯವಾಗುವುದಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net