

ಅವಿನಾಶ್ ಜೈನಹಳ್ಳಿ ಮೈಸೂರು
ಎಲ್ಲಿಯಾದರೂ ದೊಡ್ಡ ಅಗ್ನಿ ಅವಘಡ ಸಂಭವಿಸುತ್ತಿದ್ದಂತೆ ಅರೆಗಳಿಗೆಯಲ್ಲಿ ಘಟನಾ ಸ್ಥಳಕ್ಕೆ ಬರುವ ಅಗ್ನಿಶಾಮಕ ದಳದ ಸಿಬ್ಬಂದಿಗೆ ಜಲ ವಾಹನಗಳ ಕೊರತೆ ಎದುರಾಗಿದೆ. ಇದು ಅಗ್ನಿ ಅವಘಡಗಳಂತಹ ಕ್ಷಿಪ್ರ ಕಾರ್ಯಾಚರಣೆಗೆ ತೊಡಕಾಗಿರುವುದಷ್ಟೇ ಅಲ್ಲದೆ, ಭಾರಿ ಅನಾಹುತಕ್ಕೂ ಕಾರಣವಾಗಿದೆ.
ಜಿಲ್ಲೆಯಲ್ಲಿನ 12 ಅಗ್ನಿ ಶಾಮಕ ದಳ ಠಾಣೆಗಳಲ್ಲಿ 30 ಜಲ ವಾಹನಗಳ ಪೈಕಿ 20 ವಾಹನ ಮೂಲೆ ಸೇರಿದ್ದು, ಉಳಿದ 10 ವಾಹನಗಳಷ್ಟೇ ಕಾರ್ಯಾಚರಣೆಗೆ ಬಳಕೆಯಾಗುತ್ತಿವೆ. ಇದು ಮೈಸೂರಿಗಷ್ಟೇ ಸೀಮಿತವಾಗದೇ ಇಡೀ ರಾಜ್ಯಾದ್ಯಂತ ಇರುವ ಎಲ್ಲ ಅಗ್ನಿಶಾಮಕ ಠಾಣೆಗಳು ಎದುರಿಸುತ್ತಿರುವ ಸಮಸ್ಯೆಯಾಗಿದೆ.
ಈಗಾಗಲೇ ಬೇಸಿಗೆ ಆರಂಭವಾಗಿದ್ದು, ನಿತ್ಯ ಹತ್ತಾರು ಅಗ್ನಿ ಅವಘಡಗಳು ಸಂಭವಿಸುತ್ತಲೇ ಇವೆ. ಸಾಮಾನ್ಯವಾಗಿ ಮಳೆಗಾಲ ಮತ್ತು ಚಳಿಗಾಲದಲ್ಲಿ ಅಗ್ನಿ ಅನಾಹುತ ಸಂಬಂಧ ನಾಲ್ಕರಿಂದ ಐದು ಕರೆಗಳು ಬರುತ್ತಿದ್ದವು. ಬೇಸಿಗೆ ಹಿನ್ನೆಲೆಯಲ್ಲಿ ಕಳೆದ ನಾಲ್ಕು ತಿಂಗಳಿಂದ ನಿತ್ಯ ಅಗ್ನಿ ಶಾಮಕ ಠಾಣೆಗಳಿಗೆ 25ರಿಂದ 30 ಕರೆಗಳು ಬರುತ್ತಿವೆ. ಇದರಿಂದ ಅಗ್ನಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಬೇಕಾಗಿರುವ ಸಿಬ್ಬಂದಿಗೆ ವಾಹನ ಸಮಸ್ಯೆ ಹೆಚ್ಚಾಗಿದ್ದು, ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ದಿಡ್ಡಿಬಾಗಿಲು ಹಾಕಿದರೂ ಎಂಬಂತೆ ಆರಂಭದಲ್ಲೇ ಅಗ್ನಿ ಅನಾಹುತ ತಡೆಯಲು ಸಾಧ್ಯವಾಗದೆ ಎಲ್ಲ ಮುಗಿದ ಮೇಲೆ ವರದಿ ಮಾಡಿಕೊಂಡು ಬರುವಂತಾಗಿದೆ ಅಗ್ನಿಶಾಮಕ ಸಿಬ್ಬಂದಿ ಸ್ಥಿತಿ.
ಕೇಂದ್ರ ಸರ್ಕಾರದ 2022-23ರ ಹೊಸ ಗುಜರಿ ನೀತಿ ಅಗ್ನಿ ಶಾಮಕ ವಾಹನಗಳ ಸಂಚಾರಕ್ಕೆ ಸಂಕಷ್ಟ ತಂದೊಡ್ಡಿದೆ. 15 ವರ್ಷಗಳ ಹಳೆಯ ವಾಹನಗಳ ನೋಂದಣಿ ನವೀಕರಿಸದಂತೆ ಕೇಂದ್ರ ಸರ್ಕಾರ ಆದೇಶ ಮಾಡಿರುವ ಹಿನ್ನೆಲೆಯಲ್ಲಿ ಮೈಸೂರು ನಗರ ಮತ್ತು ಜಿಲ್ಲೆ ಯಲ್ಲಿ ಚಾಲನೆಯಲ್ಲಿದ್ದ 30 ವಾಹನಗಳ ಪೈಕಿ 20 ವಾಹನಗಳು ಮೂಲೆ ಸೇರಿವೆ. ಅಗ್ನಿ ಶಾಮಕ ಸಿಬ್ಬಂದಿ ಈ ಜಲ ವಾಹನಗಳನ್ನು ಕಾರ್ಯಾಚರಣೆಗೆ ಬಳಸಲು ಸಾಧ್ಯವಾಗದೆ, ಇರುವ 10 ವಾಹನಗಳಲ್ಲಿಯೇ ಇಡೀ ಜಿಲ್ಲೆಯಲ್ಲಿ ಅಗ್ನಿ ನಂದಿಸುವ ಕಾರ್ಯಕ್ಕೆ ಬಳಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ತುರ್ತು ಮತ್ತು ಅನಿವಾರ್ಯ ಸಂದರ್ಭದಲ್ಲಿ ಗುಜರಿ ವಾಹನಗಳನ್ನು ಬಳಸಲಾಗುತ್ತಿದೆ.
ರಾಜ್ಯ ಅಗ್ನಿ ಶಾಮಕ ದಳ ಇಲಾಖೆಯಲ್ಲಿ 15 ವರ್ಷ ಪೂರೈಸಿದ 443 ಜಲವಾಹನಗಳಿದ್ದು, ಕೇಂದ್ರ ಸರ್ಕಾರದ ಮೋಟಾರು ವಾಹನ ಕಾಯ್ದೆ ಪ್ರಕಾರ ಇವುಗಳಿಗೆ ಫಿಟ್ನೆಸ್ ಸರ್ಟಿಫಿಕೆಟ್(ಎಫ್‌ಸಿ), ಇನ್ಶೂರೆನ್ಸ್ ಆಗುತ್ತಿಲ್ಲ. ಪರಿಣಾಮ ಸುರಕ್ಷತಾ ಪ್ರಮಾಣ ಪತ್ರ ನೀಡಿ ನೋಂದಣಿ ನವೀಕರಿಸುವ ಕಾರ್ಯವಾಗಿಲ್ಲ. ಇನ್ನಷ್ಟು ವಾಹನಗಳು ನೋಂದಣಿಯಾಗದೆ ಇರುವುದರಿಂದ ಮೂಲೆ ಸೇರುವ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಮೈಸೂರು ನಗರ ಸೇರಿದಂತೆ ಜಿಲ್ಲೆಯಲ್ಲಿ 12 ಅಗ್ನಿ ಶಾಮಕ ಠಾಣೆಗಳಿದ್ದು, 30 ಜಲ ವಾಹನಗಳು ಇವೆ. ಈಗ 20 ವಾಹನಗಳನ್ನು ಹೊಸ ಗುಜರಿ ನೀತಿಯಿಂದ ಬಳಕೆ ಮಾಡಲಾಗುತ್ತಿಲ್ಲ. ಉಳಿದ 10 ವಾಹನಗಳನ್ನು ಸರಸ್ವತಿಪುರಂ, ಹೆಬ್ಬಾಳು, ಬನ್ನಿಮಂಟಪ ಸೇರಿದಂತೆ ಎಲ್ಲ ತಾಲೂಕು ಕೇಂದ್ರಗಳಲ್ಲಿ ಬಳಕೆಯಾಗುತ್ತಿವೆ.
ಸಿಬ್ಬಂದಿಗೆ ಹೆಚ್ಚಿದ ಒತ್ತಡ: ಒಂದೇ ಬಾರಿ ಮೂರ್ನಾಲ್ಕು ಅಗ್ನಿ ಅನಾಹುತ ಸಂಬಂಧ ಕರೆ ಬಂದರೆ ಅಗ್ನಿ ಶಮನಕ್ಕೆ ತೆರಳಲು ವಾಹನಗಳ ಕೊರತೆ ಎದುರಾಗಿದೆ. ಒಂದು ಕಾರ್ಯಾಚರಣೆ ಮುಗಿಸಿಕೊಂಡು ಬರುವವರೆಗೂ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಬೇರೆಡೆಯಿಂದ ವಾಹನ ಕರೆಸುವಷ್ಟರಲ್ಲಿ ಕಾಲಾವಕಾಶ ಹೆಚ್ಚಾಗಿರುವುದರಿಂದ ಅಗ್ನಿ ಅನಾಹುತ ತೀವ್ರತೆ ಹೆಚ್ಚಾಗಿ ಸಮಸ್ಯೆಯಾಗುತ್ತಿದೆ. ಸೇನಾ ಪಡೆಯಲ್ಲಿ 15 ವರ್ಷ ಮೇಲ್ಪಟ್ಟ ವಾಹನಗಳ ಬಳಕೆಗೆ ಅವಕಾಶ ಇರುವಂತೆ ತುರ್ತು ಸೇವೆಗೆ ಬಳಕೆಯಾಗುತ್ತಿರುವ ಅಗ್ನಿ ಶಾಮಕ ವಾಹನಗಳ ಬಳಕೆಗೆ ಅನುಮತಿ ನೀಡುವುದು ಅಗತ್ಯವಾಗಿದೆ ಎಂದು ಅಗ್ನಿ ಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 11ಕ್ಕೂ ಹೆಚ್ಚು ವಾಹನಗಳು 15 ವರ್ಷ ಪೂರೈಸಿದ್ದು, ಅಗ್ನಿ ಅವಘಡಗಂತಹ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ಜಲ ವಾಹನಗಳ ಕೊರತೆ ಇದೆ. ಇನ್ನೂ ಹೆಚ್ಚುವರಿಯಾಗಿ 10 ಹೊಸ ವಾಹನಗಳನ್ನು ನೀಡುವಂತೆ ಇಲಾಖೆಗೆ ಪತ್ರ ಬರೆಯಲಾಗಿದೆ. ಈಗ ಲಭ್ಯವಿರುವ ವಾಹನಗಳನ್ನೇ ಬಳಸಿಕೊಂಡು ಎಲ್ಲೆಡೆ ಬೆಂಕಿ ನಂದಿಸುವ ಕಾರ್ಯಾಚರಣೆ ಮಾಡಲಾಗುತ್ತಿದೆ. ಕೆ.ಪಿ.ಗುರುರಾಜ್ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ