ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅನುದಾನ ಬಳಕೆಯಲ್ಲಿ ಲೋಪ

20blrp1
Published on

ಬೇಲೂರು: ತಾಲೂಕಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸರ್ಕಾರದಿಂದ ಬರುವ ಅನುದಾನ ಬಳಕೆಯಲ್ಲಿ ಲೋಪ ಕಂಡು ಬರುತ್ತಿದೆ ಎಂದು ತಾಲೂಕು ಕೆಡಿಪಿ ಸದಸ್ಯ ಚೇತನ್‌ಸಿ.ಗೌಡ ಹೇಳಿದರು.


ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಕಚೇರಿಗೆ ಶುಕ್ರವಾರ ಕೆಡಿಪಿ ಸದಸ್ಯರ ತಂಡ ಭೇಟಿ ನೀಡಿ ಜಿಲ್ಲಾ ನೋಡಲ್ ಅಧಿಕಾರಿ ಡಾ.ಚೇತನ್ ಅವರ ಬಳಿ ಅನುದಾನದ ಬಗ್ಗೆ ಮಾಹಿತಿ ಕೇಳಿ ಮಾತನಾಡಿದ ಅವರು, ತಾಲೂಕಿನಲ್ಲಿ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಇಲ್ಲಿ ವೈದ್ಯರ ಕೊರತೆ ಇದೆ. ತಾಲೂಕು ಆರೋಗ್ಯಾಧಿಕಾರಿ ಇಲ್ಲಿಗೆ ಭೇಟಿ ನೀಡದಿರುವುದೇ ಇದಕ್ಕೆ ಕಾರಣ. ಜತೆಗೆ ವಸತಿ ನಿಲಯಗಳಿಗೆ ತೆರಳಿ ಆಹಾರದ ಗುಣಮಟ್ಟ, ಪ್ರಥಮ ಚಿಕಿತ್ಸೆ ನೀಡುವ ಬಗ್ಗೆ ಪರಿಶೀಲಿಸುತ್ತಿಲ್ಲ. ಮಾಹಿತಿ ಕೇಳಿದರೆ ದಿನ ದೂಡುತ್ತಿದ್ದಾರೆ. ತಾಲೂಕಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸರ್ಕಾರದಿಂದ ಬರುವ ಅನುದಾನದ ಬಗ್ಗೆ ಕೇಳಿದರೂ ಆರೋಗ್ಯಾಧಿಕಾರಿಗಳು ಮಾಹಿತಿ ಕೊಡದಿರುವುದಕ್ಕೆ ಹಣ ದುರ್ಬಳಕೆಯಾಗಿರುವುದೇ ಕಾರಣ ಎಂದು ಆರೋಪಿಸಿದರು.


ಕೆಡಿಪಿ ಸದಸ್ಯ ನಂದೀಶ್ ಮಾತನಾಡಿ, ಸರ್ಕಾರದಿಂದ ನಾಲ್ಕು ವರ್ಷಗಳಿಂದ ಬಂದ ಅನುದಾನ ಯಾವ ಆಸ್ಪತ್ರೆಗೆ, ಯಾವುದಕ್ಕೆ ಖರ್ಚು ಮಾಡಿದ್ದೀರಾ? ಕೆಲ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಶಿಷ್ಟಾಚಾರ ಕಲಿತಿಲ್ಲ. ಕೆಡಿಪಿ ಸದಸ್ಯರಿಗೆ ಕಾರ್ಯಕ್ರಮಗಳ ಮಾಹಿತಿ ನೀಡುತ್ತಿಲ್ಲ, ರೋಗಿಗಳು ಆಸ್ಪತ್ರೆಗೆ ಬಂದರೆ ಹಣ ಕೇಳುತ್ತಿದ್ದಾರೆ. ಇದನ್ನೆಲ್ಲ ತಾಲೂಕು ಆರೋಗ್ಯಾಧಿಕಾರಿ ಗಮನಿಸಬೇಕು ಮತ್ತು ತಕ್ಷಣವೇ ಮಾಹಿತಿ ನೀಡಬೇಕು ಎಂದರು.


ಜಿಲ್ಲಾ ನೋಡಲ್ ಅಧಿಕಾರಿ ಡಾ. ಚೇತನ್ ಮಾತನಾಡಿ, ಕೆಡಿಪಿ ಸದಸ್ಯರು ಪತ್ರದ ಮುಖಾಂತರ ಮಾಹಿತಿ ಕೇಳಿದರೆ ಅದನ್ನು ಮೇಲಧಿಕಾರಿಗಳಿಗೆ ತಿಳಿಸಿ ಅವರ ಮಾರ್ಗದರ್ಶನದಂತೆ ನಡೆದುಕೊಳ್ಳುತ್ತೇವೆ. ಮುಂದಿನ ಒಂದು ವಾರದಲ್ಲಿ ನಿಮಗೆ ಮಾಹಿತಿ ನೀಡಲಾಗುವುದು ಎಂದರು.


ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಮಾತನಾಡಿ, ನಾಲ್ಕು ವರ್ಷದಿಂದ ಸರ್ಕಾರದಿಂದ ಬಂದಿರುವ ಅನುದಾನದ ಬಗ್ಗೆ ಎಷ್ಟು ಖರ್ಚಾಗಿದೆ ಎಂಬುದರ ಬಗ್ಗೆ ಆಡಿಟ್ ಮಾಡಿಸಲಾಗುತ್ತಿದೆ. ನಂತರ ಕೆಡಿಪಿ ಸದಸ್ಯರಿಗೆ ಮಾಹಿತಿ ಒದಗಿಸಲಾಗುವುದು ಎಂದರು.
ಕೆಡಿಪಿ ಸದಸ್ಯರಾದ ಜ್ಯೋತಿ, ಸುಹಿಲ್‌ಪಾಷ, ನವೀನ್, ಆಡಳಿತ ವೈದ್ಯಾಧಿಕಾರಿ ಡಾ.ಸುಧಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net