ಗದಗ ಜಿಲ್ಲಾ ಬಿಜೆಪಿಯಲ್ಲಿ ಒಗ್ಗಟ್ಟಿನ ಕೊರತೆ

BJP
Published on

ಶಿವಾನಂದ ಹಿರೇಮಠ ಗದಗ
ಉತ್ತರ ಧ್ರುವದಿಂ ದಕ್ಷಿಣ ಧ್ರುವಕು… ಎಂಬ ಹಾಡಿನ ಸಾಲಿನಂತೆ ಗದಗ ಜಿಲ್ಲಾ ಬಿಜೆಪಿ ಹಲವು ಮುಖಂಡರಲ್ಲಿ ಒಗ್ಗಟ್ಟಿನ ಕೊರತೆ ಕಾಡುತ್ತಿದೆ. ಕಾರ್ಯಕರ್ತರಲ್ಲಿ ಉತ್ಸಾಹ ಕಳೆಗುಂದಿದೆ. ಈ ಬೆಳವಣಿಗೆ ಮುಂಬರುವ ಗ್ರಾಪಂ, ತಾಪಂ, ಜಿಪಂ, ಪುರಸಭೆ ಹಾಗೂ ಲೋಕಸಭೆ ಚುನಾವಣೆ ಮೇಲೆ ಪ್ರಭಾವ ಬೀರಲಿದೆ.

ಸಂಘಟನೆ ಬಲವಿಲ್ಲದ ಬಿಜೆಪಿಯು ಕಾಂಗ್ರೆಸ್ ಪ್ರಾಬಲ್ಯದ ಎದುರು ಮಂಕಾಗಿದೆ. ವಿರುದ್ಧ ದಿಕ್ಕಿನಲ್ಲಿ ಹಲವರು ಮುಖ ಮಾಡಿದ್ದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಪಕ್ಷದ ಸ್ಥಾನದಲ್ಲಿ ಬಿಜೆಪಿಯ ಹಲವು ಮುಖಂಡರು ವಿಲರಾಗಿದ್ದಾರೆ. ಕಾರ್ಯಕರ್ತರಿಗೆ ನಾಯಕನ ಬಲವಿಲ್ಲದ ಕಾರಣ ಪಕ್ಷ ಸಂಘಟನೆಯಿಂದ ಹಿಂದಡಿ ಇಟ್ಟಿದ್ದಾರೆ.

ವಿಶ್ವದಲ್ಲೇ ಹೆಚ್ಚು ಸದಸ್ಯರ ನೋಂದಣಿ ಹೊಂದಿದ ರಾಷ್ಟ್ರೀಯ ಪಕ್ಷದ ಸ್ವರೂಪದಂತೆ ಜಿಲ್ಲಾ ಬಿಜೆಪಿಯಲ್ಲಿ ಚಟುವಟಿಕೆಗಳೇ ನಡೆಯುತ್ತಿಲ್ಲ. ವೇದಿಕೆ ಪ್ರತಿಭಟನೆ, ಸುದ್ದಿಗೋಷ್ಠಿಗೆ ಮಾತ್ರ ಸೀಮಿತವಾಗಿದ್ದು, ನಾಯಕನಿಲ್ಲದ ದೋಣಿಯಂತೆ ಕ್ಷೇತ್ರದಲ್ಲಿ ಕಾರ್ಯಕರ್ತರ ನೋವು ಆಲಿಸುವ ಮುಖಂಡರಿಲ್ಲ ಎಂದು ಕಾರ್ಯಕರ್ತರು ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ.

ನರಗುಂದ ಕ್ಷೇತ್ರ

ಮಾಜಿ ಸಚಿವರು, ನರಗುಂದ ಕ್ಷೇತ್ರದ ಶಾಸಕರಾಗಿರುವ ಸಿ.ಸಿ. ಪಾಟೀಲ ಅವರು ಜಿಲ್ಲಾ ಬಿಜೆಪಿ ಘಟಕದಲ್ಲಿ ನಿರ್ಧಾರಗಳನ್ನು ಕೈಗೊಳ್ಳುವ ಪ್ರಭಾವ ಹೊಂದಿದ್ದಾರೆ. ನಗರಸಭೆ ಆಡಳಿತ ವೈಖರಿ, ಜಿಲ್ಲಾಧ್ಯಕ್ಷ ಮುತ್ತಣ್ಣ ಲಿಂಗನಗೌಡ್ರ ನೇಮಕ ವಿಚಾರದಲ್ಲಿ ಮುಖಂಡರಲ್ಲಿ ಇರುವ ಹಲವು ಭಿನ್ನಾಭಿಪ್ರಾಯ ಶಮನಗೊಳಿಸಲು ಹಲವು ಪ್ರಯತ್ನ ಮಾಡಿದ್ದರೂ ಗದಗ ಶಹರದಲ್ಲಿ ಆಗುತ್ತಿರುವ ಡ್ಯಾಮೇಜ್ ಕಂಟ್ರೋಲ್‌ಗೆ ಅವರು ಆಸಕ್ತಿ ತೋರಿಸುತ್ತಿಲ್ಲ.

ಪ್ರಸಕ್ತ ಚುನಾವಣೆಯಲ್ಲಿ ಟಿಕೆಟ್ ನಿರ್ಧರಿಸುವ ಮತ್ತು ಜಿಲ್ಲೆಯಲ್ಲಿ ಚುನಾವಣೆ ತಂತ್ರಗಾರಿಕೆ ನಡೆಸುವ ಸ್ವಾತಂತ್ರ್ಯವನ್ನು ಸಿ.ಸಿ. ಪಾಟೀಲ ಅವರಿಗೆ ನೀಡಲಿಲ್ಲ. ಕ್ಷೇತ್ರಕ್ಕೆ 1,800 ಕೊಟಿ ರೂ. ಅನುದಾನ ತಂದು ರಸ್ತೆಗಳನ್ನು ಅಭಿವೃದ್ಧಿಗೊಳಿಸಿದರೂ ಸಿ.ಸಿ. ಪಾಟೀಲ ಅವರ ಗೆಲುವಿನ ಅಂತರ 1,700 ಮತಗಳ ಮಾತ್ರ. ಅಭಿವೃದ್ಧಿಗೆ ಜನ ಮನ್ನಣೆ ನೀಡದೇ ಇರುವುದು ಅವರಿಗೆ ನೋವು ತರಿಸಿದೆ. ಹೀಗಾಗಿ, ಜಿಲ್ಲಾ ಬಿಜೆಪಿಗೆ ಮೇಜರ್ ಸರ್ಜರಿಗೂ ಅವರು ಮನಸ್ಸು ಮಾಡುತ್ತಿಲ್ಲ ಎಂಬ ಮಾತು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.

ಗದಗನಲ್ಲಿ ಭಿನ್ನಾಭಿಪ್ರಾಯ

ಬಿಜೆಪಿ ಜಿಲ್ಲಾಧ್ಯಕ್ಷ ಮುತ್ತಣ್ಣ ಲಿಂಗನಗೌಡ್ರ ಪ್ರಭಾವಿ ಅಲ್ಲ ಎಂಬುದು ಹಲವರ ಅಭಿಪ್ರಾಯ. ಕಾರ್ಯಕರ್ತರು ಗುರುತಿಸುವಷ್ಟು ಕೂಡ ಜಿಲ್ಲಾಧ್ಯಕ್ಷರ ಪ್ರಭಾವ ಇಲ್ಲ ಎಂಬ ಮಾತು ಕೇಳಿ ಬರುತ್ತಿವೆ. ಬಿಜೆಪಿಯ ನಗರ, ಮಂಡಳ, ನಗರಸಭೆ, ನಗರ ಮತ್ತು ಗ್ರಾಮಿಣ ಬ್ಲಾಕ್ ಅಧ್ಯಕ್ಷರು, ತಾಲೂಕು ಅಧ್ಯಕ್ಷರೂ ಮತ ಸೆಳೆಯಬಲ್ಲ ಪ್ರಾಬಲ್ಯ ಹೊಂದಿಲ್ಲ ಎಂಬುದು ಕೆಲ ಕಾರ್ಯಕರ್ತರು ಅಭಿಪ್ರಾಯವಾಗಿದೆ. ಮುಖಂಡರಲ್ಲಿ ಮನಸ್ತಾಪ, ಮುಂದಾಳತ್ವದ ಕೊರತೆ, ಸ್ವಹಿತಾಸಕ್ತಿಯಿಂದ ಗದಗನಲ್ಲಿ ಬಿಜೆಪಿ ಸೊರಗಿದೆ.

ಶಿರಹಟ್ಟಿ ತಲೆಬೇನೆ

ಶಿರಹಟ್ಟಿ ಕ್ಷೇತ್ರದಲ್ಲಿ ರಾಜಕಾರಣವೇ ಭಿನ್ನ ದಿಕ್ಕಿನಲ್ಲಿ ಸಾಗುತ್ತಿದೆ. ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಕಳೆಗುಂದಿದೆ. ಪದಾಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಶಾಸಕರು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ನಡುವೆ ಸಮನ್ವಯ ಕೊರತೆಯಿಂದ ಸಕ್ರಿಯ ಚಟುವಟಿಕೆಯಿಂದ ಜಾರಿಕೊಂಡಿದ್ದಾರೆ. ಟಿಕೆಟ್ ಕೈ ತಪ್ಪಿದ ನಂತರ ರಾಮಣ್ಣ ಲಮಾಣಿ ಪಕ್ಷ ಸಂಘಟನೆಯಿಂದ ಸಂಪೂರ್ಣ ಹಿಂದೆ ಸರಿದಿದ್ದಾರೆ. ಶಾಸಕ ಚಂದ್ರು ಲಮಾಣಿ ಈ ಬೆಳವಣಿಗೆಯನ್ನು ಸವಾಲಾಗಿ ಸ್ವೀಕರಿಸಬೇಕಿದೆ.

ಕಳೆದ ಬಾರಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನನ್ನನ್ನು ಆಹ್ವಾನಿಸಲಾಗಿತ್ತು. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ. ಅಧ್ಯಕ್ಷರ ಬದಲಾವಣೆ ರಾಜ್ಯ ಮುಖಂಡರಿಗೆ ಸಂಬಂಧಿಸಿದ ವಿಷಯವಾಗಿದ್ದು, ನಮ್ಮ ಕಾರ್ಯವ್ಯಾಪ್ತಿಗೆ ಸಂಬಂಧಿಸಿದ್ದಲ್ಲ.ರಾಜು ಕುರಡಗಿರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net