

ಅವಿನಾಶ್ ಜೈನಹಳ್ಳಿ ಮೈಸೂರು
ರಾಜಧಾನಿ ಬೆಂಗಳೂರು ಬಳಿಕ ರಾಜ್ಯದಲ್ಲಿ ಅತಿ ಹೆಚ್ಚು ಕ್ರೀಡಾ ಚಟುವಟಿಕೆಗಳು ನಡೆಯುವ ‘ಸಾಂಸ್ಕೃತಿಕ ನಗರಿ’ ಮೈಸೂರಿನಲ್ಲಿ ಈಜುಕೊಳಗಳ ಬರ ಕಾಡುತ್ತಿದೆ.
ಸರಸ್ವತಿಪುರಂನಲ್ಲಿರುವ ಮೈಸೂರು ವಿವಿ ಈಜುಕೊಳ, ಚಾಮುಂಡಿ ವಿಹಾರ ಕ್ರೀಡಾಂಗಣದ ಆವರಣದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಈಜುಕೊಳ, ಜೆ.ಪಿ.ನಗರದ ಪಂಡಿತ್ ಪುಟ್ಟರಾಜ ಗವಾಯಿ ಕ್ರೀಡಾ ಸಂಕೀರ್ಣದಲ್ಲಿ ಪಾಲಿಕೆ ವತಿಯಿಂದ ನಿರ್ಮಿಸಿರುವ ಈಜುಕೊಳ ಮಾತ್ರ ನಗರದಲ್ಲಿನ ಸಾರ್ವಜನಿಕರ ಈಜಕೊಳಗಳಾಗಿವೆ.
ಜೂನ್ ಮೊದಲ ವಾರದಿಂದ ಸರಸ್ವತಿಪುರಂನಲ್ಲಿರುವ ಮೈಸೂರು ವಿವಿ ಕೊಳದಲ್ಲಿ ದುರಸ್ತಿ ಕಾಮಗಾರಿ ಆರಂಭವಾಗುವುದರಿಂದ ತಾತ್ಕಾಲಿಕವಾಗಿ ಸದರಿ ಕೊಳವನ್ನು ಮುಚ್ಚುವ ಸಾಧ್ಯತೆ ಇದೆ. ಹೀಗಾಗಿ ಮೈಸೂರು ವಿವಿ ಈಜುಕೊಳ ಕೆಲ ತಿಂಗಳು ಸಾರ್ವಜನಿಕ ಬಳಕೆಯಿಂದ ದೂರ ಉಳಿಯಲಿದೆ.
ಚಾಮುಂಡಿ ವಿಹಾರ ಕ್ರೀಡಾಂಗಣ ಆವರಣದಲ್ಲಿ ಕ್ರೀಡಾ ಇಲಾಖೆ ವತಿಯಿಂದ ನಿರ್ಮಿಸಿರುವ ಈಜುಕೊಳದಲ್ಲಿ ಪಾಸ್ ಪಡೆದವರಿಗೆ ಮಾತ್ರ ಅವಕಾಶ ಇದೆ. ಜೆ.ಪಿ.ನಗರದಲ್ಲಿ ಪಾಲಿಕೆ ವತಿಯಿಂದ ನಿರ್ಮಿಸಿ ಖಾಸಗಿಯವರಿಗೆ ಗುತ್ತಿಗೆ ನೀಡಿರುವ ಈಜುಕೊಳ ಮಾತ್ರ ಸದ್ಯ ನಗರದ ಈಜುಪ್ರಿಯರ ಮನತಣಿಸುತ್ತಿದೆ. ಇದು ಚಿಕ್ಕ ಈಜುಕೊಳವಾಗಿದ್ದು, ಅಭ್ಯಾಸ ಮಾಡಲು ಕಷ್ಟವಾಗಿದೆ. ಹೀಗಾಗಿ, ಈಜು ಕಲಿಯಲು ಮತ್ತು ಅಭ್ಯಾಸ ಮಾಡಲು ಮೈಸೂರಿನ ಮಕ್ಕಳು ಬೆಂಗಳೂರಿಗೆ ಹೋಗಬೇಕಾದ ಪರಿಸ್ಥಿತಿ ಇದೆ.
14 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ನಗರ ಮೈಸೂರು. ವಿಶ್ವದ ಪ್ರಮುಖ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳು, ಮಾಲ್‌ಗಳು, ಹೋಟೆಲ್‌ಗಳು, ಕೈಗಾರಿಕೆಗಳು ತಲೆ ಎತ್ತುತ್ತಿವೆ. ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಬೆಂಗಳೂರಿನ ಬಳಿಕ ಅತಿ ಹೆಚ್ಚು ಕ್ರೀಡಾ ಚಟುವಟಿಕೆಗಳು ನಡೆಯುವುದು ಇಲ್ಲಿಯೇ. ಆದರೆ ಸ್ಪರ್ಧಿಗಳಿಗೆ ಬೇಕಿರುವ ಅಂತಾರಾಷ್ಟ್ರೀಯ ದರ್ಜೆಯ ಈಜುಕೊಳವೇ ಇಲ್ಲ. ನಗರದಲ್ಲಿ ಹೆಚ್ಚಿನ ಈಜುಕೊಳ ನಿರ್ಮಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೇರಿದಂತೆ ನಗರಪಾಲಿಕೆ ಕ್ರಮವಹಿಸಬೇಕಿದೆ.
ನಗರದ ನಾಲ್ಕು ಮೂಲೆಗಳಲ್ಲೂ ಈಜುಕೊಳ ಸ್ಥಾಪಿಸಬೇಕು ಎಂಬ ನಗರಪಾಲಿಕೆಯ ಮಹತ್ವಾಕಾಂಕ್ಷಿ ಯೋಜನೆ ಪ್ರಾರಂಭಿಕ ಹಂತದಲ್ಲೇ ನೆಲ ಕಚ್ಚಿರುವುದು ಎಲ್ಲರಿಗೂ ಗೊತ್ತಿದೆ. ಈ ಹಿಂದೆ ಈಜುಪಟುಗಳಿಗೆ ಪ್ರೋತ್ಸಾಹ ನೀಡಲು ಪಾಲಿಕೆ ವತಿಯಿಂದ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಬ್ಲಿಕ್-ಪ್ರೈವೇಟ್ ಪಾರ್ಟಿಸಿಪೇಷನ್) ಯೋಜನೆಯಡಿ ನಾರಾಯಣಶಾಸ್ತ್ರಿ ರಸ್ತೆ, ಶಾರದಾದೇವಿನಗರ, ಹೆಬ್ಬಾಳು, ಕನ್ನೇಗೌಡ ಕ್ರೀಡಾಂಗಣದಲ್ಲಿ ಈಜುಕೊಳ ನಿರ್ಮಿಸಲು ಉದ್ದೇಶಿಸಲಾಗಿತ್ತು. ಈ ಯೋಜನೆಗೆ ಅನುಮತಿ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಆದರೆ ಮೈಸೂರು ಭಾಗದ ಪ್ರಭಾವಿ ಶಾಸಕರೊಬ್ಬರು ತಮ್ಮ ಸಂಬಂಧಿಕರಿಗೆ ಈಜುಕೊಳದ ಟೆಂಡರ್ ಸಿಗಲಿಲ್ಲ ಎಂಬ ಕಾರಣಕ್ಕೆ ಇಡೀ ಯೋಜನೆ ಜಾರಿಯಾಗದಂತೆ ನೋಡಿಕೊಂಡರು ಎಂದು ಕೆಲವರು ದೂರುತ್ತಾರೆ. ಹೀಗಾಗಿ ಪಾಲಿಕೆಯ ಮಹತ್ವಾಕಾಂಕ್ಷಿ ಯೋಜನೆ ಪ್ರಾರಂಭದ ಹಂತದಲ್ಲೇ ನಿಂತಿದೆ.
ಈ ಯೋಜನೆಯ ಪ್ರಕಾರ ಪಾಲಿಕೆಯು ಖಾಸಗಿಯವರಿಗೆ ತಮ್ಮ ಜಾಗ ನೀಡಬೇಕು. ಆ ಜಾಗದಲ್ಲಿ ಖಾಸಗಿಯವರು ತಮ್ಮ ಹಣದಲ್ಲಿಯೇ ಈಜುಕೊಳಗಳನ್ನು ನಿರ್ಮಿಸಿಕೊಳ್ಳುತ್ತಿದ್ದರು. ಜತೆಗೆ ನಿರ್ವಹಣೆ ಹೊಣೆ ಹೊರುವುದರ ಜತೆಗೆ ಈಜುಕೊಳದ ಜಾಗಕ್ಕಾಗಿ ಪಾಲಿಕೆಗೆ ಬಾಡಿಗೆ ಪಾವತಿಸುತ್ತಿದ್ದವು.
ಅಂತೆಯೇ, ಪಾಲಿಕೆ ಕೆಲ ಖಾಸಗಿ ಕಂಪನಿಗಳಿಗೆ ಗುತ್ತಿಗೆಯನ್ನು ನೀಡಲು ಮುಂದಾಗಿತ್ತು. ಈ ಸಂಬಂಧ ಶಾರದಾದೇವಿನಗರ ಮತ್ತು ನಾರಾಯಣಶಾಸ್ತ್ರಿ ರಸ್ತೆ (ಬಾಹುಸಾರ್ ಈಜು ಕೊಳ)ಯಲ್ಲಿ ಈಜುಕೊಳ ನಿರ್ಮಾಣಕ್ಕೆ ಭೂಮಿಪೂಜೆ ಕೂಡ ಮಾಡಲಾಗಿತ್ತು. ಬಳಿಕ ಯೋಜನೆ ನಿಂತುಹೋದ ಕಾರಣ ಭೂಮಿ ಪೂಜೆ ಮಾಡಿದ್ದ ಶಾರದಾದೇವಿನಗರದಲ್ಲಿ ಈಜು ಕೊಳದ ಬದಲಿಗೆ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಯಿತು. ಬಾಹುಸಾರ್ ಈಜುಕೊಳ ಇದ್ದ ಜಾಗದಲ್ಲೂ ಯೋಗ ಮಂದಿರ ಕಟ್ಟಲು ಕೆಲವರು ಮುಂದಾಗಿದ್ದರು. ಬಳಿಕ ಈಜುಪ್ರಿಯರ ವಿರೋಧದಿಂದ ಯೋಗ ಮಂದಿರ ಕಟ್ಟುವುದನ್ನು ನಿಲ್ಲಿಸಿ ಖಾಲಿ ಜಾಗವನ್ನು ಹಾಗೆ ಉಳಿಸಿಕೊಂಡಿದ್ದಾರೆ.
ಈಗಲಾದರೂ ನಗರದ ನಾಲ್ಕು ಭಾಗದಲ್ಲೂ ಈಜುಕೊಳ ನಿರ್ಮಿಸಬೇಕಿದೆ. ಈ ಬಾರಿ ಪಾಲಿಕೆ ಬಜೆಟ್‌ನಲ್ಲಿ ನಗರದ ನಾನಾ ಭಾಗದಲ್ಲಿ ಈಜುಕೊಳ ನಿರ್ಮಿಸಲು ಯೋಜನೆ ಘೋಷಣೆ ಮಾಡಬೇಕಿದೆ. ‘ಮೈಸೂರು ನಗರದಲ್ಲಿ ಪ್ರತಿಭಾನ್ವಿತ ಈಜುಪಟುಗಳಿದ್ದು, ರಾಷ್ಟ್ರ ಮಟ್ಟದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ನಗರದಲ್ಲಿ ಒಲಿಂಪಿಕ್ಸ್ ಮಾದರಿಯ ನಾಲ್ಕು ಈಜುಕೊಳಗಳು ನಿರ್ಮಾಣವಾಗಬೇಕಿದೆ. ಮುಖ್ಯವಾಗಿ ಬಾಹುಸಾರ್ ಈಜುಕೊಳದ ಸ್ಥಳದಲ್ಲಿ ಮತ್ತೆ ಈಜುಕೊಳ ನಿರ್ಮಿಸಬೇಕು’ ಎಂದು ಈಜುಪಟು ಶ್ರೀಕಾಂತ್ ಒತ್ತಾಯಿಸಿದ್ದಾರೆ.
ಮೈಸೂರು ನಗರದಲ್ಲಿ ಪ್ರತಿಭಾನ್ವಿತ ಈಜುಪಟುಗಳಿದ್ದು, ಜನಸಂಖ್ಯೆ ಹಾಗೂ ಇಲ್ಲಿನ ಪ್ರತಿಭೆಗಳಿಗೆ ಅನುಗುಣವಾಗಿ ಈಜುಕೊಳಗಳ ಕೊರತೆ ಇದೆ ಎನ್ನುವುದು ಗೊತ್ತಿದೆ. ನಗರದ ನಾರಾಯಣಶಾಸ್ತ್ರಿ ರಸ್ತೆಯ ಸ್ವಾತಂತ್ರೃ ಹೋರಾಟಗಾರರ ಉದ್ಯಾನ(ಬಾಹುಸಾರ್ ಈಜುಕೊಳ)ದ ಪಕ್ಕದಲ್ಲಿ ಸೇರಿದಂತೆ ನಗರದ ನಾಲ್ಕು ಭಾಗದಲ್ಲೂ ಈಜುಕೊಳ ನಿರ್ಮಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಈ ಸಂಬಂಧ ಪಾಲಿಕೆ ಬಜೆಟ್‌ನಲ್ಲಿ ಯೋಜನೆ ರೂಪಿಸಲಾಗುವುದು.ಶಿವಕುಮಾರ್ ಮೇಯರ್.