

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈಜುಕೊಳಗಳ ಕೊರತೆ ಕಾಡುತ್ತಿದ್ದು, ನಗರದಲ್ಲಿ ಹೆಚ್ಚಿನ ಈಜುಕೊಳ ನಿರ್ಮಾಣ ಮಾಡುವಂತೆ ಸಾರ್ವಜನಿಕರು ಹಾಗೂ ಈಜುಪ್ರಿಯರು ಆಗ್ರಹಿಸಿದ್ದಾರೆ.
ಸರಸ್ವತಿಪುರಂನಲ್ಲಿರುವ ಮೈಸೂರು ವಿವಿ ಈಜುಕೊಳ, ಚಾಮುಂಡಿ ವಿಹಾರ ಕ್ರೀಡಾಂಗಣ ಆವರಣದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಈಜುಕೊಳ, ಜೆ.ಪಿ.ನಗರದ ಪಂಡಿತ್ ಪುಟ್ಟರಾಜ ಗವಾಯಿ ಕ್ರೀಡಾ ಸಂಕೀರ್ಣದಲ್ಲಿ ಪಾಲಿಕೆ ವತಿಯಿಂದ ನಿರ್ಮಿಸಿರುವ ಈಜುಕೊಳ ಸದ್ಯ ನಗರದಲ್ಲಿ ಈಜುಪ್ರಿಯರ ಮನ ತಣಿಸುತ್ತಿವೆ. ಜೆ.ಪಿ.ನಗರದ ಈಜುಕೊಳ ಚಿಕ್ಕದಾಗಿದ್ದು, ಇಲ್ಲಿ ಅಭ್ಯಾಸ ಮಾಡಲು ಕಷ್ಟವಾಗಿದೆ. ಕಾಮಗಾರಿ ಹಿನ್ನೆಲೆಯಲ್ಲಿ ಮೈಸೂರು ವಿವಿ ಈಜುಕೊಳ ಸದ್ಯಕ್ಕೆ ಲಭ್ಯವಿಲ್ಲ.
14 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಮೈಸೂರು ನಗರ ವಿಶ್ವದ ಪ್ರಮುಖ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ನಗರದಲ್ಲಿ ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳು, ಮಾಲ್‌ಗಳು, ಹೋಟೆಲ್‌ಗಳು, ಕೈಗಾರಿಕೆಗಳು ತಲೆ ಎತ್ತುತ್ತಿವೆ. ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಬೆಂಗಳೂರಿನ ಬಳಿಕ ಅತಿ ಹೆಚ್ಚು ಕ್ರೀಡಾ ಚಟುವಟಿಕೆ ನಡೆಯುವುದು ಇಲ್ಲಿಯೇ. ಆದರೆ ಸ್ಪರ್ಧಿಗಳಿಗೆ ಬೇಕಿರುವ ಅಂತಾರಾಷ್ಟ್ರೀಯ ದರ್ಜೆಯ ಈಜುಕೊಳವೇ ಇಲ್ಲ. ಇರುವ ಬೆರಳೆಣಿಕೆ ಕೊಳಗಳಲ್ಲೇ ಸಾವಿರಾರು ಜನ ಈಜಬೇಕಾಗಿದೆ.