

ಮಂಜುನಾಥ ಎಸ್.ಸಿ. ಹೊಸಕೋಟೆ
ತಾಲೂಕಿನ 28 ಗ್ರಾಮ ಪಂಚಾಯಿತಿಗಳ ಪೈಕಿ 19ರಲ್ಲಿ ಕಸ ವಿಲೇವಾರಿಗೆ ಸೂಕ್ತ ಜಾಗವೇ ಇಲ್ಲದಂತಾಗಿದೆ. ಪ್ರತಿ ಪಂಚಾಯಿತಿಯಲ್ಲಿ ಸುಮಾರು 60 ್ಡ40 ಅಳತೆಯ ಸರ್ಕಾರಿ ಜಾಗ ದೊರೆತರೆ ಪ್ರತಿ ಗ್ರಾಮದ ಕಸವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಿ ಕಸಮುಕ್ತ ಗ್ರಾಮವನ್ನಾಗಿಸಬಹುದಾಗಿದೆ.
ಸಮೇತನಹಳ್ಳಿ, ಸೂಲಿಬೆಲೆ, ಹೊರೊಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಮನೆಯಿಂದ ಕಸ ಸಂಗ್ರಹಣೆ ಮಾಡಲಾಗುತ್ತಿದ್ದು, ಕಸ ವಿಲೇವಾರಿ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ತಾವರೆಕೆರೆ, ದೊಡ್ಡನಲ್ಲಾಳ, ಇಟ್ಟಸಂದ್ರ, ನೆಲವಾಗಿಲು, ಶಿವನಾಪುರ ಹಾಗೂ ಬೈಲ್‌ನರಸಾಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ಹಂತದಲ್ಲಿದ್ದು, ತಿಂಗಳಲ್ಲಿ ಮನೆಮನೆಯಿಂದ ಕಸ ಸಂಗ್ರಹಿಸುವ ಕೆಲಸ ಶುರು ಮಾಡಲಾಗುವುದು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಶ್ರೀನಾಥ್‌ಗೌಡ ತಿಳಿಸಿದ್ದಾರೆ. ಇನ್ನುಳಿದ 19 ಪಂಚಾಯಿತಿಗಳಲ್ಲಿ ಜಾಗದ ಸಮಸ್ಯೆ ಇದ್ದು, ಕನಿಷ್ಠ ಎರಡು ಪಂಚಾಯಿತಿಗಳಿಗೆ ಒಂದು ಘಟಕ ನಿರ್ಮಾಣಕ್ಕೆ ಜಾಗದ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಬಿಬಿಎಂಪಿ ಕಸ ಹಾವಳಿ: ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಬಿಎಂಪಿ ಕಸ ಹಾಕುತ್ತಿರುವ ಪ್ರಕರಣ ತಿಳಿದುಬಂದಿದ್ದು, ಈ ಬಗ್ಗೆ ಖಾಸಗಿ ಎನ್‌ಜಿಒ ಸಹಭಾಗಿತ್ವದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಕಸ ಹಾಕುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಾಪಂ ಇಒ ಶ್ರೀನಾಥ್‌ಗೌಡ ತಿಳಿಸಿದರು.
ರಸ್ತೆ ಬದಿ ಕಸದ ರಾಶಿ: ಗ್ರಾಮಗಳಲ್ಲಿ ಕಸ ವಿಲೇವಾರಿಯಾಗದೆ ಗ್ರಾಮಸ್ಥರು ಹಸಿಕಸವನ್ನು ಗೊಬ್ಬರಮಾಡಿ ತೋಟ, ಹೊಲಗಳಿಗೆ ಹಾಕುತ್ತಿದ್ದು, ಒಣ ಕಸವನ್ನು ರಸ್ತೆ ಅಕ್ಕ ಪಕ್ಕದ ನಿವೇಶನದಲ್ಲಿ ಎಸೆಯಲಾಗುತ್ತಿದೆ. ಅದಕ್ಕೂ ಮಿಗಿಲಾಗಿ ಕೋಳಿ ಅಂಗಡಿ, ಹೋಟೆಲ್, ಕಾರ್ಖಾನೆ, ಡಾಬಾಗಳ ಕಸವನ್ನು ರಸ್ತೆಗಳ ಅಕ್ಕ-ಪಕ್ಕ, ಕೆರೆಯಂಗಳದಲ್ಲಿ ಹಾಕಿ ಅನೈರ್ಮಲ್ಯ ನಿರ್ಮಾಣ ಮಾಡಲಾಗಿದೆ.
ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ಪಂಚಾಯಿತಿಗಳು ಕಸ ವಿಲೇವಾರಿ ಘಟಕ ನಿರ್ಮಿಸಿದರೆ ಸಮಸ್ಯೆ ಇಲ್ಲ. ಜಾಗ ಬೇಕೆಂದು ಮನವಿ ನೀಡಿದರೆ, ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಸ್ಥಳದ ವ್ಯವಸ್ಥೆ ಮಾಡಲಾಗುವುದು. ಗೀತಾ, ತಹಸೀಲ್ದಾರ್, ಹೊಸಕೋಟೆ ದೇವನಗುಂದಿ ಪಂಚಾಯಿತಿಯಲ್ಲಿ ಕಾರ್ಖಾನೆಗಳು ಬರುವುದರಿಂದ ಕಸದ ಸಮಸ್ಯೆ ಹೆಚ್ಚಾಗಿದೆ. ಎರಡು ವರ್ಷಗಳಿಂದ ದುನ್ನಸಂದ್ರ ಕ್ರಾಸ್ ರಸ್ತೆ ಪಕ್ಕದಲ್ಲಿ ಬಿದ್ದಿರುವ ಕಸವನ್ನು ಈಗ ತೆರವುಗೊಳಿಸಲಾಗುತ್ತಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕ ಬೇಕಿದ್ದು, ಈ ಬಗ್ಗೆ ತಹಸೀಲ್ದಾರ್‌ಗೆ ತಾಪಂ ಇಒ ಮೂಲಕ ಮನವಿ ನೀಡಲಾಗಿದೆ. ಶ್ರೀನಿವಾಸ್, ದೇವನಗುಂದಿ ಗ್ರಾಪಂ ಅಭಿವೃದ್ಧಿ ಅಧಿಕಾರಿ