ಶವ ಸಂಸ್ಕಾರಕ್ಕೆ ಜಾಗದ ಕೊರತೆ

mbl
Published on

ಎ.ಅಪ್ಪಾಜಿ ಗೌಡ ಮುಳಬಾಗಿಲು: ನಗರದಲ್ಲಿನ ಹಳೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸೋಮೇಶ್ವರ ಕೆರೆ ಪಕ್ಕದ ಹಿಂದುಗಳ ಸ್ಮಶಾನ ಜಾಗ ಒತ್ತುವರಿಯಾಗಿದ್ದು, ಬಲಿಜ, ವಾಲ್ಮೀಕಿ ಸೇರಿ ವಿವಿಧ ಸಮುದಾಯದವರು ಮೃತಪಟ್ಟರೆ ಶವ ಸಂಸ್ಕಾರಕ್ಕೂ ಜಾಗದ ಕೊರತೆ ಕಾಡುತ್ತಿದೆ.

ಹೌದು...! ನಗರದ ಸೋಮೇಶ್ವರಪಾಳ್ಯದ ವಾರ್ಡ್​ ನಂ.31ರ ವ್ಯಾಪ್ತಿಯಲ್ಲಿನ ಸೋಮೇಶ್ವರ ಕೆರೆ ಪಕ್ಕದ ಸ್ಮಶಾನದಲ್ಲಿ ಬಲಿಜ, ವಾಲ್ಮೀಕಿ ಸಮುದಾಯ ಸೇರಿ ವಿವಿಧ ಸಮುದಾಯದವರ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ. ಆದರೆ ಸ್ಮಶಾನ ಜಾಗದ ದಕ್ಷಿಣಕ್ಕೆ ರಸ್ತೆ ಬದಿ ಅಳವಡಿಸಲಾಗಿರುವ ಕಬ್ಬಿಣದ ತಡೆಬೆಲಿ ಬಳ್ಳಿಗಳು ಸುತ್ತಿಕೊಂಡು ಹಾಳಾಗಿದೆ. ಉತ್ತರಕ್ಕೆ ಸ್ಮಶಾನ ಒತ್ತುವರಿಯಾಗಿದ್ದು, ದಕ್ಷಿಣಕ್ಕೆ ಒತ್ತುವರಿ ಬಗ್ಗೆ ಸರ್ವೇ ಇಲಾಖೆ ಸ್ಪಷ್ಟಪಡಿಸಬೇಕಿದೆ. ಇನ್ನು ಪೂರ್ವಕ್ಕೆ(ಶ್ರೀನಿವಾಸಪುರ&ಕುರುಡಮಲೆ ರಸ್ತೆ) ಕಟ್ಟಿದ್ದ ಪ್ರವೇಶದ್ವಾರ ಸಂಪೂರ್ಣ ಹಾಳಾಗಿದ್ದು, ಇರುವ ಅಲ್ಪಸ್ವಲ್ಪ ಜಾಗವೂ ನಿರ್ವಹಣೆ ಇಲ್ಲದೆ ಗಿಡ&ಗಂಟಿ ಬೆಳೆದು, ಶವ ಹೂಳಲು ಜಾಗದ ಕೊರತೆ ಕಾಡುತ್ತಿದೆ. ಅಲ್ಲದೇ ಅಂತ್ಯಸಂಸ್ಕಾರಕ್ಕೆ ತೆರಳುವವರು ಗಿಡ&ಗಂಟಿಯಿಂದಾಗಿ ಭಯಬೀಳುವಂತಾಗಿದೆ. ಸ್ಮಶಾನದ ಒತ್ತುವರಿ ತೆರವಿಗೆ, ದುರಸ್ತಿಗೆ ಅಧಿಕಾರಿಗಳು ಮಾತ್ರ ಅಸಡ್ಡೆ ತೋರುತ್ತಿದ್ದು, ಸೋಮೇಶ್ವರ ಪಾಳ್ಯದ ಹಿಂದುಗಳು ಶವ ಸಂಸ್ಕಾರಕ್ಕೆ ಪರದಾಡುತ್ತಿದ್ದಾರೆ.

ಗಿಡ&ಗಂಟಿ ಕತ್ತರಿಸಿ ಅಂತ್ಯಸಂಸ್ಕಾರ

ನಗರದ ಜನಸಂಖ್ಯೆ 75 ಸಾವಿರ ಗಡಿ ದಾಟಿದ್ದು, ಅದರಲ್ಲಿ 40 ಸಾವಿರಕ್ಕೂ ಅಧಿಕ ಹಿಂದುಗಳಿದ್ದಾರೆ. ಆದರೆ ಜನಸಂಖ್ಯೆಗೆ ಅನುಗುಣವಾಗಿ ಸ್ಮಶಾನ ಜಾಗ ಇಲ್ಲ. ಇರುವ ಸ್ಮಶಾನಗಳ ಒತ್ತುವರಿ ತಡೆಯಲು ತಾಲೂಕು ಆಡಳಿತ ಮತ್ತು ನಗರಸಭೆ ಗಮನಹರಿಸುತ್ತಿಲ್ಲ. ಕನಿಷ್ಠ ಸ್ಮಶಾನಕ್ಕೆ ಹೋಗಿ ಬರುವ ದಾರಿಯೂ ಸರಿಯಾಗಿಲ್ಲದ ಕಾರಣ ಶವವನ್ನು ತೆಗೆದುಕೊಂಡು ಹೋಗುವಾಗ ಹಾದಿಯಲ್ಲಿನ ಗಿಡ&ಗಂಟಿ ಕತ್ತರಿಸಿ ಹೋಗಬೇಕಾದ ಪರಿಸ್ಥಿತಿ ಇದೆ. ಗಿಟಗಂಟಿ ಕತ್ತರಿಸಿದ ಜಾಗದಲ್ಲೇ ಸಂಸ್ಕಾರ ಮಾಡುವಂತಾಗಿದೆ.

"ಮೊದಲ ಹಂತದಲ್ಲಿ ಕೆರೆಗಳ ಒತ್ತುವರಿ ತೆರವು ಕೈಗೆತ್ತಿಕೊಂಡಿದ್ದು, ಇನ್ನೂ 18 ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ಮುಗಿದ ಬಳಿಕ ಸ್ಮಶಾನ ಒತ್ತುವರಿ ತೆರವುಮಾಡಿ, ಅಭಿವೃದ್ಧಿಪಡಿಸಲಾಗುವುದು. ಮೊದಲ ಹಂತದಲ್ಲಿ ನಗರಕ್ಕೆ ಆದ್ಯತೆ ನೀಡಲಾಗುವುದು."

- ವಿ.ಗೀತಾ, ತಹಸೀಲ್ದಾರ್​, ಮುಳಬಾಗಿಲು ತಾಲೂಕು

"ನಗರದಲ್ಲಿರುವ ಹಿಂದುಗಳ ಸ್ಮಶಾನ ಜಾಗದ ಸರ್ವೇ ಕಾರ್ಯ ತಾಲೂಕು ಆಡಳಿತದಿಂದ ಆಗಬೇಕಿದೆ. ಸ್ಮಶಾನದ ಗಡಿ ಗುರುತಿಸಿಕೊಟ್ಟರೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾವನೆ ಇಟ್ಟು, ಅನುಮೋದನೆ ದೊರೆತ ನಂತರ ಅಭಿವೃದ್ಧಿಪಡಿಸಲಾಗುವುದು."

- ವಿ. ಶ್ರೀಧರ್​

ಪೌರಾಯುಕ್ತ, ನಗರಸಭೆ, ಮುಳಬಾಗಿಲು,

"ನಗರದ ಸೋಮೇಶ್ವರಪಾಳ್ಯದ ವಾರ್ಡ್​ ನಂ.31ಕ್ಕೆ ಹೊಂದಿಕೊಂಡಿರುವ ಹಿಂದುಗಳ(ವಾಲ್ಮೀಕಿ ಸಮುದಾಯ) ಸ್ಮಶಾನ ಜಾಗವನ್ನು ತಾಲೂಕು ಕಚೇರಿಯಿಂದ ಸರ್ವೇ ಮಾಡಿ ಗಡಿ ಗುರುತಿಸಿಕೊಟ್ಟರೆ, ಶಾಸಕ ಸಮೃದ್ಧಿ ವಿ.ಮಂಜುನಾಥ್​ ಅವರಿಂದ ಅನುದಾನ ಬಿಡುಗಡೆಗೊಳಿಸಿ, ಸ್ಮಶಾನ ಅಭಿವೃದ್ಧಿಪಡಿಸಲಾಗುವುದು."

- ಮುನಿರಾಜು,

ನಗರಸಭೆ ವಾರ್ಡ್​ ನಂ.28ರ ಸದಸ್ಯ

"ನಗರದ ಸೋಮೇಶ್ವರಪಾಳ್ಯದ ವಾರ್ಡ್​ ನಂ.31ಕ್ಕೆ ಹೊಂದಿಕೊಂಡ ಹಿಂದುಗಳ ಸ್ಮಶಾನದಲ್ಲಿ ಬಲಿಜ, ವಾಲ್ಮೀಕಿ ಸಮುದಾಯ ಸೇರಿ ಎಲ್ಲ ಹಿಂದುಗಳ ಅಂತ್ಯಕ್ರಿಯೆ ನಡೆಸಲಾಗುತ್ತಿದ್ದು, ಅಭಿವೃದ್ಧಿ ಮಾತ್ರ ಶೂನ್ಯ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಒತ್ತುವರಿ ತೆರವುಗೊಳಿಸಿ, ಅಭಿವೃದ್ಧಿಪಡಿಸಬೇಕು."

- ಕೆ.ಅಮರೇಶ

ಬಿಜೆಪಿ ನಗರ ಮಂಡಲ ಮಾಜಿ ಅಧ್ಯಕ್ಷ, ಮುಳಬಾಗಿಲು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net